ನಾವು ದಿನನಿತ್ಯ ದೇವರನ್ನು ಶ್ರದ್ಧಾಭಕ್ತಿಯಿಂದ ಭಜಿಸುವುದು, ಪೂಜಿಸುವುದು ಏಕೆ? ಕಾಣಲು ಸಿಗದ ಆ ದೇವರನ್ನು ಅದೆಂತು ನಾವು ಸಮೀಪಿಸುವುದು? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜವೇ. ದೇವರಲ್ಲಿ ನಮಗೆ ನಿಜವಾದ ಭಕ್ತಿ, ಶ್ರದ್ಧೆ ಬರಬೇಕಾದರೆ ನಮ್ಮಲ್ಲಿನ ಅಹಂಕಾರಗಳೆಲ್ಲವೂ ನಾಶವಾಗಿ ಹೋಗಬೇಕು. ‘ತೇ ನ ವಿನಾ ತೃಣಮಪಿ ನ ಚಲತಿ’ ಎನ್ನುವುದನ್ನು ನಿತ್ಯವೂ ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ದೇವರ ಅನುಗ್ರಹವಿಲ್ಲದಿದ್ದರೆ ಒಂದು ಹುಲ್ಲುಕಡ್ಡಿಯೂ ಚಲಿಸದು ಎನ್ನುವ ತಿಳಿವಳಿಕೆಯನ್ನು ಹೊಂದಿದಾಗ ನಾವು ಯಾವುದಕ್ಕೂ ಅಹಂಕಾರಪಡುವ ಪ್ರಶ್ನೆಯೇ ಇಲ್ಲ. ಏಕೆಂದರೆ ಈ ಐಹಿಕ ಪ್ರಪಂಚದ ಸಮಸ್ತ ವಸ್ತುಗಳ ಒಡೆಯ ಆ ದೇವನಲ್ಲದೆ ಬೇರಾರೂ ಅಲ್ಲ, ನಾವೆಲ್ಲ ಕೇವಲ ಅವುಗಳ ಉಸ್ತುವಾರಿದಾರರು. ಈ ಐಹಿಕ ಜಗತ್ತಿನಲ್ಲಿ ನಾವು ಸಂಪಾದಿಸಿದ್ದೆಂದು ಭಾವಿಸುವ ವಸ್ತುಗಳ ಒಡೆಯರು ನಾವೇ ಎಂದು ಭ್ರಮಿಸಿದಾಗ ನಮ್ಮ ಅಧಃಪತನ ಆರಂಭಗೊಳ್ಳುತ್ತದೆ. ಅದಕ್ಕಾಗಿಯೇ ಗೀತೆಯಲ್ಲಿ ಶ್ರೀಕೃಷ್ಣ ನಮ್ಮನ್ನು ಎಚ್ಚರಿಸುವುದು ಹೀಗೆ: ಈ ವರೆಗೆ ಆದದ್ದೆಲ್ಲವೂ ಒಳಿತಿಗಾಗಿಯೇ ಆಗಿದೆ ಎಂದು ಭಾವಿಸು. ಈಗ ಆಗುತ್ತಿರುವುದೆಲ್ಲವೂ ಒಳ್ಳೆಯದಕ್ಕೇ ಆಗುತ್ತಿದೆ ಎಂದು ತಿಳಿದುಕೋ, ಇನ್ನು ಮುಂದೆ ಆಗುವುದೆಲ್ಲವೂ ಒಳ್ಳೆಯದೇ ಆಗುವುದು ಎಂದು ಭಾವಿಸು. ಕಳೆದುಕೊಂಡೆನೆಂದು ವಿಷಾದಿಸಲು ನೀನು ಇಲ್ಲಿಗೆ ತಂದಿರುವುದಾದರೂ ಏನನ್ನು? ಗಳಿಸಿದೆನೆಂದು ಸಂಭ್ರಮಿಸಲು ಇಲ್ಲಿಂದ ನೀನು ಕೊಂಡು ಹೋಗುವುದಾದರೂ ಏನನ್ನು? ಕೃಷ್ಣನ ಈ ಮಾತುಗಳು ನಿಷ್ಕಾಮಕರ್ಮ ಪಥದಲ್ಲಿ ಸಾಗುವ ಮೂಲಕ ಮೋಕ್ಷವನ್ನು ಸಾಧಿಸಲು ನಮಗೆ ದಾರಿದೀಪವಾಗಿವೆ. ಈ ಐಹಿಕ ಪ್ರಪಂಚದಲ್ಲಿ ನಾವು ಯಾವುದೇ ಐಶ್ವರ್ಯ, ಸಿರಿಸಂಪತ್ತಿನ ಒಡೆಯರೂ ಅಲ್ಲ; ಕೇವಲ ಉಸ್ತುವಾರಿದಾರರು. ಆ ದೇವನೊಬ್ಬನೇ ಒಡೆಯ. ಆದುದರಿಂದ ನಾವು ಯಾವುದೇ ಕಾರಣಕ್ಕೆ ಇಲ್ಲಿ ಅಹಂಕಾರ ಪಡಬಾರದು. ಒಂದೊಮ್ಮೆ ಅಹಂಕಾರ ಪಟ್ಟದ್ದೇ ಆದಲ್ಲಿ ನಮ್ಮನ್ನು ನಾವು ದೇವರಿಂದ ಬೇರ್ಪಡಿಸಿ ಕೊಂಡಂತೆ ಆಗುವುದು. ಕಾಮ-ಕ್ರೋಧಾದಿಗಳೆಂಬ ಅಜ್ಞಾನದಿಂದ ಆವರಿಸಲ್ಪಟ್ಟಷ್ಟು ಕಾಲವೂ ಮತ್ತೆ ಮತ್ತೆ ಜನನ-ಮರಣಗಳ ಚಕ್ರಕ್ಕೆ ಸಿಲುಕಿಕೊಳ್ಳುವೆವು.