47. ಮೋಹ ಪರವಶತೆ
ನಾನು, ನನ್ನದು, ನನ್ನವರು ಎಂಬಿತ್ಯಾದಿ ಭಾವಗಳಲ್ಲಿ ಉದ್ದೀಪನಗೊಳ್ಳುವ ಮೂಲ ಭಾವ ಯಾವುದು? ಮಮಕಾರ! ಆದರೆ ನಿಜಕ್ಕೂ ಅದರಲ್ಲಿ ಅಡಗಿರುವುದು ನಮ್ಮೊಳಗಿನ ಆರು ಮಹಾ ಶತ್ರುಗಳೇ ಆಗಿವೆ. ಅವು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು. ಇವೆಲ್ಲ ಭಾವಗಳು ದೇಹದಾರಿಗಳಾದ ಮನುಜರಿಗೆ ಇಂದ್ರಿಯ ಸಹಜವಾಗಿ ಬಂದಿವೆ. ದೇಹದ ಮೂಲಕವೇ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವಷ್ಟು ಕಾಲವೂ ಈ ಅರಿಷಡ್ವರ್ಗಗಳು ನಮ್ಮನ್ನು ನಿರಂತರವಾಗಿ ಕಾಡುತ್ತಲೇ ಇರುತ್ತವೆ; ಪೀಡಿಸುತ್ತಲೇ ಇರುತ್ತವೆ. ಈ ಪೀಡನೆಯ ಫಲವಾಗಿ ನಾವು ಕೈಗೊಳ್ಳುವ ಸಮಸ್ತ ಕ್ರಿಯೆಗಳಿಂದ ನಮ್ಮ ಮುಂದಿನ ಜನ್ಮದ ಸ್ಥಿತಿ-ಗತಿಗಳು ನಿರ್ಣಯವಾಗುತ್ತವೆ. ನಿಜವಾದ ಅರ್ಥದಲ್ಲಿ ನಮ್ಮೆಲ್ಲ ನಡೆ, ನುಡಿ, ಕ್ರಿಯೆಗಳು ನಮ್ಮ ಮುಂದಿನ ಜನ್ಮವನ್ನು ನಿರ್ಣಯಿಸುವ ಅಂಶಗಳೇ ಆಗಿವೆ. ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ತಿಳಿಸುವ ಸತ್ಯವೂ ಇದೇ ಆಗಿದೆ. ದೇಹ ಇಂದಲ್ಲ ನಾಳೆ ಬಿದ್ದು ಹೋಗುವ ಸಾಧನ. ಅದೊಂದು ಕೇವಲ ಉಪಕರಣ ಮಾತ್ರ. ಆತ್ಮ ಮಾತ್ರವೇ ಶಾಶ್ವತ. ಅದಕ್ಕೆ ಸಾವೆಂಬುದಿಲ್ಲ. ಆದುದರಿಂದ ಜನನ-ಮರಣಗಳೆಂಬ ವಿದ್ಯಾಮಾನಗಳ ಬಗ್ಗೆ ಭಾವ ಪರವಶತೆ ಬೇಡ. ಇದನ್ನು ಪುಷ್ಟೀಕರಿಸಲೆಂಬಂತೆ ಕೃಷ್ಣ ಹೇಳುತ್ತಾನೆ; ವಾಸ್ತವವಾಗಿ ನಾನು ಯಾವ ಕಾಲದಲ್ಲಿಯೂ ಇರಲಿಲ್ಲ ಅಥವಾ ನೀನೂ ಇರಲಿಲ್ಲ ಅಥವಾ ರಾಜ ಮಹಾರಾಜರುಗಳೂ ಇರಲಿಲ್ಲ ಎಂಬಂತೇನೂ ಇಲ್ಲ ಮತ್ತು ಇನ್ನು ಮುಂದೆಯೂ ನಾವು ಇರುವುದಿಲ್ಲ ಎಂಬಂತೆಯೂ ಇಲ್ಲ. ಹೇಗೆ ಜೀವಾತ್ಮನಿಗೆ ಈ ದೇಹದಲ್ಲಿ ಬಾಲ್ಯ, ಯೌವನ ಮತ್ತು ವೃದ್ಧಾವಸ್ಥೆಗಳು ಜರಗುತ್ತವೆಯೋ ಅದೇ ರೀತಿ ಅನ್ಯ ಶರೀರವೂ ಪ್ರಾಪ್ತಿಯಾಗುತ್ತದೆ. ಈ ವಿಷಯದಲ್ಲಿ ಆತ್ಮಜ್ಞಾನಿಯಾದವನು ಮೋಹ ಪರವಶನಾಗುವುದಿಲ್ಲ.