Home » ಲೋಕಾಃ ಸಮಸ್ತಾಃ ….
 

ಲೋಕಾಃ ಸಮಸ್ತಾಃ ….

by Kundapur Xpress
Spread the love
  1. ಲೋಕಾಃ ಸಮಸ್ತಾಃ ….

‘ಜನನ-ಮರಣಗಳ ಚಕ್ರದಿಂದ ನಮ್ಮನ್ನು ಪಾರುಗೊಳಿಸಿ ಶಾಶ್ವತವಾಗಿ ನಿನ್ನ ಸನ್ನಿಧಿಯನ್ನು ಕರುಣಿಸು ದೇವರೇ’ ಎಂಬ ಪ್ರಾರ್ಥನೆ ನಿಜವಾದ ಅರ್ಥದಲ್ಲಿ ಮೋಕ್ಷವನ್ನು ಹಂಬಲಿಸುವ ಪ್ರಾರ್ಥನೆಯಾಗಿದೆ. ಇಂತಹ ಪ್ರಾರ್ಥನೆಯು ಸಾಧ್ಯವಾಗಬೇಕಿದ್ದರೆ ಸ್ವಾರ್ಥಪರ ಬೇಡಿಕೆಗಳನ್ನು ದೇವರ ಮುಂದೆ ನಿವೇದಿಸಿಕೊಳ್ಳುವ ಪ್ರವೃತ್ತಿಯಿಂದ ನಾವು ಮೊತ್ತಮೊದಲು ಮುಕ್ತರಾಗಬೇಕು ಆದುದರಿಂದಲೇ ವೇದಗಳಲ್ಲಿ ಯಾವತ್ತೂ ಪ್ರಾರ್ಥನೆಗಳು ‘ಲೋಕಾಃ ಸಮಸ್ತಾಃ ಸುಖೀನೋ ಭವಂತು’ ಎಂಬುದೇ ಆಗಿದೆ. ದೇವರು ಸಮಸ್ತ ಲೋಕವನ್ನು ಉದ್ದರಿಸಲಿ; ಎಲ್ಲರನ್ನೂ ರಕ್ಷಿಸಿ ಪೋಷಿಸಲಿ, ಎಲ್ಲರ ಬುದ್ಧಿಯನ್ನೂ ಆತ ಜ್ಞಾನವೆಂಬ ಬೆಳಕಿನಿಂದ ಪ್ರಚೋದಿಸಲಿ ಎಂಬ ಪ್ರಾರ್ಥನೆಯನ್ನು ನಾವು ಅಲ್ಲಿ ಕಾಣುತ್ತೇವೆ. ದೇವರನ್ನೇ ಕಾಣಬೇಕೆಂಬ ಹಂಬಲ ಹೊತ್ತ ಭಕ್ತನಿಗೆ ದೇವರ ಬಿಂಬದ ಮುಂದೆ ನಿಂತಾಗ ‘ನನಗೆ ಅದನ್ನು ದಯಪಾಲಿಸು, ಇದನ್ನು ದಯಪಾಲಿಸು’ ಎಂಬ ಲೌಕಿಕ ಬೇಡಿಕೆಗಳು ಉತ್ಪನ್ನವಾಗಲು ಸಾಧ್ಯವೇ ಇಲ್ಲ ಎಂಬುದಕ್ಕೆ ನಮಗೆ ವಿವೇಕಾನಂದರೇ ಉದಾಹರಣೆಯಾಗಿದ್ದಾರೆ. ಅವರು ಪದವೀಧರ ನರೇಂದ್ರರಾಗಿದ್ದ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ತುಂಬ ಪ್ರಯತ್ನಿಸಿ ಸೋತು, ಮನೆಮಂದಿಯ ಬಡತನದಿಂದ ಅಧೀರರಾದಾಗ, ಪರಮ ಹಂಸರ ಬಳಿಗೆ ಹೋಗಿ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ಒಡನೆಯೇ ಪರಮ ಹಂಸರು ‘ಕಾಳಿಕ ದೇವಿಯಲ್ಲಿ ನಿನ್ನ ಕಷ್ಟಗಳನ್ನು ನಿವೇದಿಸಿ ಉದ್ಯೋಗ ದೊರಕಿಸೆಂದು ಪ್ರಾರ್ಥಸಿಕೋ’ ಎನ್ನುತ್ತಾರೆ. ಅಂತೆಯೇ ಕಾಳಿಕಾಮಾತೆಯ ಮುಂದೆ ನಿಂತು ಪ್ರಾರ್ಥಸಿಕೊಂಡ ನರೇಂದ್ರನಿಗೆ ಪರಮಹಂಸರು ‘ಏನು, ಉದ್ಯೋಗ ಕರುಣಿಸೆಂದು ಬೇಡಿಕೊಂಡ ತಾನೆ?’ ಎಂದು ಪ್ರಶ್ನಿಸುತ್ತಾರೆ. ಆಗ ವಿವೇಕಾನಂದರು, ‘ಅಯ್ಯೋ, ಅದನ್ನು ಮರೆತೇ ಬಿಟ್ಟೆನಲ್ಲ, ನಾನು ಕೇವಲ ಆಕೆಯನ್ನು ಸ್ತುತಿಸಿ  ನಮಿಸಿ ಬಂದೆ’ ಎನ್ನುತ್ತಾರೆ. ಆ ಬಳಿಕೆ ಮತ್ತೆ ಮತ್ತೆ ಕಾಳಿಕೆಮಾತೆಯ ಮುಂದೆ ನಿಂತಾಗಲೂ ನರೇಂದ್ರನಿಗೆ ಲೌಕಿಕ ಕಷ್ಟಗಳನ್ನು ಸಂಪೂರ್ಣ ಮರೆತು ಆಕೆಯನ್ನು ಸ್ತುತಿಸುವುದನ್ನು ಬಿಟ್ಟರೆ ಬೇರೇನೂ ಸಾಧ್ಯವಾಗುವುದಿಲ್ಲ. ಇದರಿಂದ ಪರಮಹಂಸರಿಗೆ ನರೇಂದ್ರರ ಮೇಲಿದ್ದ ಪ್ರೀತಿ ಇಮ್ಮಡಿಯಾಗುತ್ತದೆ!

   

Related Articles

error: Content is protected !!