ಮುಂಬೈ : ನಾಗಪುರ ಬಳಿಯ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಜವಾಹರ್ ನಗರದಲ್ಲಿನ ರಕ್ಷಣಾ ಇಲಾಖೆ ಕಾರ್ಖಾನೆಯ ಘಟಕವೊಂದರ ಛಾವಣಿ ಕಳಚಿ ಬಿದ್ದಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಕೊಟ್ಟೆ ತಿಳಿಸಿದ್ದಾರೆ. ಅವಶೇಷಗಳ ಅಡಿ ಇನ್ನೂ 7 ಜನ ಸಿಲುಕಿದ್ದಾರೆ. ಅವರನ್ನು ಹೊರತೆಗೆಯುವ ಕಾರ್ಯಾಚರಣೆ ನಡೆದಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸ್ಫೋಟದ ಸಮಯದಲ್ಲಿ ವಿಭಾಗದಲ್ಲಿ 14 ನೌಕರರು ಕೆಲಸ ಮಾಡುತ್ತಿದ್ದು, ಈ ಪೈಕಿ ಮೂವರನ್ನು ಜೀವಂತವಾಗಿ ರಕ್ಷಿಸಲಾಗಿದೆ.