ಕುಂದಾಪುರ : ಕರಾವಳಿ ಕರ್ನಾಟಕದ ಪ್ರಸಿದ್ಧ ನಾಗ ಅಥವಾ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಕಾಳಾವರವೂ ಒಂದು. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು, ಕೋಟೇಶ್ವರದಿಂದ ಹಾಲಾಡಿಗೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಕೋಟೇಶ್ವರದಿಂದ ಐದು ಕಿಲೋಮೀಟರ್ ದೂರದಲ್ಲಿ ಕಾಳಾವರ ಕ್ಷೇತ್ರವಿದೆ. ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಸನ್ನಿಧಿಯು ಈ ಭಾಗದ ಹೆಸರಾಂತ ಕಾರಣೀಕ ನಾಗ ಕ್ಷೇತ್ರ. ಸುಮಾರು 800 ವರ್ಷಗಳಿಗೂ ಪುರಾತನವಾದ ಇದು ”ಮಾತನಾಡುವ ನಾಗ” ಕ್ಷೇತ್ರ ಎಂಬ ಖ್ಯಾತಿ ಹೊಂದಿದೆ.
ಕಾಳಾವರ ಕ್ಷೇತ್ರದಲ್ಲಿ ವಾರ್ಷಿಕವಾಗಿ ಹಲವಾರು ಸೇವೆಗಳು ನಡೆಯುತ್ತಿದ್ದರೂ ಹಿರಿಷಷ್ಠಿ (ಚಂಪಾ ಷಷ್ಠಿ) ಮತ್ತು ಕಿರಿಷಷ್ಠಿ (ಸ್ಕಂದ ಷಷ್ಠಿ) ಬಹು ಪ್ರಸಿದ್ದ ಉತ್ಸವಗಳು. ಸ್ವಯಂಭೂ ಚೈತನ್ಯವಾದ ನಾಗನ ಮೂಲ ಲಿಂಗ ಇಲ್ಲಿದೆ. ಷಷ್ಠಿ ದಿನದಂದು ನಾಗರ ಹಾವು ಪ್ರತ್ಯಕ್ಷವಾಗುವುದು ಇಲ್ಲಿ ಸ್ವಾಭಾವಿಕ. ಸುಮಾರು ಹದಿನೈದಿಪ್ಪತ್ತು ನಿಮಿಷ ಅಲಂಕೃತ ವಿಗ್ರಹದ ಮೇಲೆ ಕುಳಿತು ಮರೆಯಾಗುತ್ತದೆ. ಮೂಲ ಹುತ್ತದಲ್ಲಿ ಸದಾ ಹಾವುಗಳಿದ್ದು ಆಗಾಗ ಕಾಣಿಸಿಕೊಳ್ಳುತ್ತವೆ ಯಾರಿಗೂ ತೊಂದರೆಯಾದದ್ದಿಲ್ಲ ರೋಗರುಜಿನಗಳ ಪರಿಹಾರ ಮೊದಲಾದ ನಾಗದೋಷ ನಿವಾರಣೆ ಪರಿಹಾರಗಳಿಗೆ ಹರಕೆ ಹೊತ್ತು ಭಕ್ತರು ಇಲ್ಲಿಗಾಗಮಿಸುತ್ತಾರೆ
ಹಿರಿ ಮತ್ತು ಕಿರಿ ಷಷ್ಠಿ ಸಂದರ್ಭಗಳಲ್ಲಿ ಹರಿಕೆ ಸಮರ್ಪಣೆಯೇ ಇಲ್ಲಿನ ವಿಶೇಷ ಸೇವೆ. ತುಲಾಭಾರ, ಉರುಳು ಸೇವೆಗಳೂ ಇವೆ. ಪ್ರಸ್ತುತ ಇಲ್ಲಿ ದೇವಳ ವ್ಯವಸ್ಥಾಪನಾ ಸಮಿತಿ ಇಲ್ಲ ಸಮಾಜ ಕಲ್ಯಾಣ ಇಲಾಖೆಯ ಉತ್ಸಾಹೀ ಅಧಿಕಾರಿ ಉಮೇಶ್ ಕೋಟ್ಯಾನ್ ಆಡಳಿತಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ. ಸಮಿತಿ ಪೂರ್ವಾಧ್ಯಕ್ಷ ಶಾನಾಡಿ ಚಂದ್ರಶೇಖರ ಹೆಗ್ಡೆ ಮಾಜಿ ಸದಸ್ಯರಿಂದೊಡಗೂಡಿದ ಉತ್ಸವ ಸಮಿತಿಯು ಆಡಳಿತಾಧಿಕಾರಿಯವರ ನಿರ್ದೇಶನದಲ್ಲಿ ಷಷ್ಠಿ ಉತ್ಸವಗಳ ಯಶಸ್ಸಿಗೆ ಶ್ರಮಿಸುತ್ತಿದೆ. ಇಂದು ಡಿ.7, 8ರಂದು ಕ್ಷೇತ್ರದಲ್ಲಿ ಚಂಪಾ ಷಷ್ಠಿ ಮಹೋತ್ಸವ ನಡೆಯುತ್ತಿದೆ