ಭಕ್ತ ಜನರ ಸಕಲ ಆಶೋತ್ತರಗಳನ್ನು ಈಡೇರಿಸುವ ಕಾರಣಿಕೆಯ ಕ್ಷೇತ್ರಗಳು ವಿಶೇಷವಾಗಿ ನಾಗಾರಾಧನೆಯ ಕ್ಷೇತ್ರಗಳು ಕರಾವಳಿ ಜಿಲ್ಲೆಯಾದ್ಯಂತ ಅಪಾರ ಸಂಖ್ಯೆಯಲ್ಲಿದ್ದು ಅಂತಹವುಗಳಲ್ಲಿ ಒಂದು ಕುಂದಾಪುರ ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ನಾಗಬೊಬ್ಬರ್ಯ ದೇವಸ್ಥಾನ
ಈ ಕ್ಷೇತ್ರದಲ್ಲಿ ಇಂದು ನಡೆಯುವ ನಾಗಮಂಡಲೋತ್ಸದ ಪೂರ್ವಭಾವಿಯಾಗಿ ಅನೇಕ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದ್ದು ಇಂದು ಫೆ.2 ಆದಿತ್ಯವಾರ ಸಕಲ ಸಂಭ್ರಮೋಲ್ಲಾಸಗಳೊಂದಿಗೆ ನಾಗಮಂಡಲ ಸೇವೆಯು ಜರುಗಲಿದೆ
ಇಂದಿಗೂ ಶ್ರೀ ನಾಗ ದೇವರ ಕೃಪೆಗೆ ಪಾತ್ರರಾಗಲು ಪ್ರಾಪಂಚಿಕ ದುರಿತಗಳಿಂದ, ರೋಗ-ರುಜಿನಗಳಿಂದ, ಕೌಟುಂಬಿಕ ಸಂಕಷ್ಟಗಳಿಂದ ಪಾರಾಗಲು ದೂರ–ದೂರದ ಊರುಗಳಿಂದ ಭಕ್ತ ಜನರ ಪ್ರವಾಹವೇ ನಾಗಮಂಡಲಕ್ಕೆ ಹರಿದು ಬರುತ್ತದೆ ಅದೆಷ್ಟೋ ಸಹಸ್ರ ಮಂದಿ ಆಸ್ತಿಕರು ಶ್ರೀ ನಾಗ ಬೊಬ್ಬರ್ಯನ ಕೃಪೆಗೆ ಪಾತ್ರರಾಗಿ ತಮ್ಮ ದುರಿತಗಳಿಂದ, ಕಷ್ಟಕೋಟಲೆಗಳಿಂದ, ರೋಗ-ರುಜಿನಗಳಿಂದ ಪಾರಾಗಿದ್ದಾರೆ
ಪ್ರಾಚೀನರ ನಾಗಾರಾಧನೆ ಕಲೆ
ಸಾಮಾನ್ಯವಾಗಿ ಮನೋರಂಜನೆಯ ಸಾಧನವಾದ ಕಲೆಯನ್ನು ಪ್ರಾಚೀನರು ದೇವತಾರಾಧನೆಗೆ ಉಪಯೋಗಿಸಿಕೊಂಡರು.ಇದರಿಂದ ಕಲೆಯ ವಿಷಯದಲ್ಲಿ ರುಚಿ ಶುದ್ದಿಯನ್ನು ಬೆಳೆಸಿಕೊಳ್ಳಲು ಮಾತ್ರವಲ್ಲ, ಕೀಳು ಮಟ್ಟದ ರಂಜನೆಗಾಗಿ ಕಲೆಯ ದುರುಪಯೋಗವನ್ನು ತಡೆಯಲು ಕೂಡ ಅವರಿಗೆ ಸಾಧ್ಯವಾಯಿತು. ಕಲೆ ವಿಕಾರ ಹೊಂದುವ ವೇಗ ಕಡಿಮೆಯಾಯಿತು. ತಮ್ಮ ಪ್ರಯತ್ನದ ಫಲವಾಗಿ ಉತ್ತಮ ಮಟ್ಟವನ್ನು ತಲುಪಿದಾಗ ಇಷ್ಟ ದೈವ ದೇವತೆಗೂ ಪ್ರೀತಿಯಾಯಿತೆಂದು ಮಾನಸಿಕ ಸಮಾಧಾನ ಸಂತೃಪ್ತಿಯನ್ನು ಅವರು ಕಂಡು ಕೊಂಡಿದ್ದರು
ನಾಗಸೇವೆಗಳ ವಿಶೇಷ :
ನಾಗಸೇವೆಗಳಲ್ಲೆಲ್ಲ ವಿಶೇಷವಾದುದು ಹಾಗೂ ಹೆಚ್ಚು ಖರ್ಚಿನದು ಎಂದರೇ ಅದು ನಾಗಮಂಡಲ.ನಾಗ ತುಂಬ ಶುದ್ಧತೆಯನ್ನು ಪವಿತ್ರತೆಯನ್ನು ಇಷ್ಟ ಪಡುವ ದೇವತೆ, ಆದುದರಿಂದ ಪವಿತ್ರ ಗಂಟಿನ ಮಂಡಲವನ್ನು ರಂಗೋಲಿಯಿಂದ ಬರೆದು ಅದರ ಸುತ್ತ ನರ್ತನ ಸೇವೆ ನಡೆಯುತ್ತದೆ. ಒಂದು ಪವಿತ್ರ, ನಾಲ್ಕು ಪವಿತ್ರ, ಎಂಟು ಪವಿತ್ರ, ಹನ್ನೆರಡು ಪವಿತ್ರ ಹಾಗೂ ಹದಿನಾರು ಪವಿತ್ರದ ಗಂಟುಗಳನ್ನು ತನ್ನ ಸುದೀರ್ಘ ಮೈಯಿಂದಲೇ ಹಾಕಿ, ಹೆಡೆಬಿಚ್ಚಿ ಕುಳಿತ ನಾಗನ ಮಂಡಲಗಳನ್ನು ಬರೆಯುವ ಕ್ರಮ ಇದೆ.
ವೈದ್ಯ ಎಂಬ ಕುಲನಾಮದ ಈ ಜನರಿಗೆ ನಾಗಮಂಡಲ, ಬ್ರಹ್ಮಮಂಡಲ, ಧಕ್ಕೆ ಬಲಿಗಳಲ್ಲಿ ನರ್ತಿಸುವುದು, ಡಕ್ಕೆ ಬಾರಿಸುವುದೇ ಪರಂಪರಾಗತ ಕಸುಬು. ಈ ವೈದ್ಯರ ಸಂಖ್ಯೆ ಇತ್ತೀಚೆಗೆ ಕ್ಷೀಣಿಸಿದೆಯಲ್ಲದೆ ನಾಗಮಂಡಲದ ವಿಶಿಷ್ಟ ಹಾಡುಗಳು, ಹಾಡುವ ಮಟ್ಟು, ಕುಣಿತಗಳ ಪರಂಪರೆ ಇಂದಿನ ಕಾಲದಲ್ಲಿ ನಶಿಸುತ್ತಿರುವುದೇ ವಿಷಾದದ ಸಂಗತಿಯಾದರೂ ಇಂದಿನ ಆಧುನಿಕ ಯುಗದಲ್ಲಿಯೂ ನಾಗಮಂಡಲದ ಸೇವೆಯು ಹಲವೆಡೆಗಳಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದ್ದು ಕಲಿಯುಗದಲ್ಲಿ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರಾಗಿ ನಾಗೇಂದ್ರ ನೆಲೆನಿಂತಿದ್ದಾನೆ
ಕೆ.ಗಣೇಶ್ ಹೆಗ್ಡೆ, ಕುಂದಾಪುರ