ಸುಬ್ರಹ್ಮಣ್ಯ ಉಡುಪಿಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಉಡುಪಿಯ ಪರ್ಯಾಯಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪುರ ಪ್ರವೇಶಿಸಿದರು.
ಆರಂಭದಲ್ಲಿ ಕಾಶಿಕಟ್ಟೆಗೆ ಆಗಮಿಸಿದ ಅವರನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ತುಳಸಿ ಹಾರ ಸಮರ್ಪಿಸಿ ಸ್ವಾಗತಿಸಿದರು. ಬಳಿಕ ಶ್ರೀಗಳು ಕಾಶಿಕಟ್ಟೆ ಮಹಾಗಣಪತಿಯ ದರುಶನ ಮಾಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.
ಕಾಶಿಕಟ್ಟೆಯಿಂದ ಭಕ್ತಿಪೂರ್ವಕವಾದ ಮೆರವಣಿಗೆ ಆರಂಭವಾಯಿತು. ದೇವಳದ ಆನೆ ಯಶಸ್ವಿ ಶ್ರೀಗಳನ್ನು ಸೊಂಡಿಲನ್ನು ಎತ್ತಿ ಸ್ವಾಗತಿಸಿತು. ನಂತರ ಆನೆ, ಬಿರುದಾವಳಿ, ಮಂಗಳವಾದ್ಯ, ಪೂರ್ಣಕುಂಭಮತ್ತು ಋತ್ವಿಜರ ಮಂತ್ರಘೋಷದೊಂದಿಗೆ ಕಾಶಿಕಟ್ಟೆಯಿಂದ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಶ್ರೀಗಳನ್ನು ಕರೆದೊಯ್ಯಲಾಯಿತು.
ದೇವರ ದರುಶನ ಮಾಡಿದ ಶ್ರೀಗಳಿಗೆ ಅರ್ಚಕರು ಮಹಾಪ್ರಸಾದ ನೀಡಿದರು. ನಂತರ ಶ್ರೀಗಳು ಸರ್ವರಿಗೂ ಫಲ ಮಂತ್ರಾಕ್ಷತೆ ನೀಡಿ ಹರಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್. ಎಸ್.ಇಂಜಾಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಮುತಾದವರು ಉಪಸ್ಥಿತರಿದ್ದರು

