Home » ಶ್ರೀವಿದ್ಯಾಮಾನ್ಯ ತೀರ್ಥರದ್ದು ಶುದ್ಧ ಚಿನ್ನದಂಥಹ ವ್ಯಕ್ತಿತ್ವ
 

ಶ್ರೀವಿದ್ಯಾಮಾನ್ಯ ತೀರ್ಥರದ್ದು ಶುದ್ಧ ಚಿನ್ನದಂಥಹ ವ್ಯಕ್ತಿತ್ವ

by Kundapur Xpress
Spread the love

ಉಡುಪಿ : ನಮ್ಮ ಸ್ವರೂಪೋದ್ಧಾರಕ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರು ನಿಷ್ಕಳಂಕ ಶುದ್ಧ ವ್ಯಕ್ತಿತ್ವದವರು. ಮನಸ್ಸು-ಮಾತು-ಕ್ರಿಯೆಗಳಲ್ಲಿ ಒಂದೇ ರೀತಿಯಲ್ಲಿ ಇದ್ದವರು. ಎಂದಿಗೂ ಇನ್ನೊಬ್ಬರನ್ನು ದ್ವೇಷಿಸುವ ಪ್ರವೃತ್ತಿ ಅವರಲ್ಲಿ ಇರಲಿಲ್ಲ. ಶುದ್ಧವಾದ ಯತಿಧರ್ಮ ಪಾಲನೆ, ಪಾಠ-ಪ್ರವಚನಗಳಲ್ಲಿ ಅಚಲವಾದ ದೀಕ್ಷೆ, ಶಿಷ್ಯ ವಾತ್ಸಲ್ಯ, ಸಮಾಜದ ಅಭಿವೃದ್ಧಿಯ ಹಂಬಲ ಮುಂತಾದ ಆದರ್ಶ ಗುಣಗಳುಳ್ಳ ಗುರುಗಳು.

ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರೇ ಮೊದಲಾದ ಅನೇಕ ಯತಿಗಳನ್ನು ವಿದ್ವಾಂಸರನ್ನಾಗಿ ರೂಪಿಸಿದವರು.
ಇಂಥಹ ಪರಿಶುದ್ಧವಾದ ವ್ಯಕ್ತಿತ್ವದ ಗುರುಗಳಿಂದ ಪೂಜಿಸಿಕೊಳ್ಳಲು ಸಂಕಲ್ಪಿಸಿ ಶ್ರೀಕೃಷ್ಣನು ಗುರುಗಳಿಗೆ ಶ್ರೀಭಂಡಾರಕೇರಿ ಮಠದ ಜೊತೆಗೆ ಶ್ರೀ ಪಲಿಮಾರು ಮಠದ ಆಧಿಪತ್ಯವನ್ನು ಕರುಣಿಸಿದ. ಭಗವಂತನ ಪರಮಾನುಗ್ರಹದಿಂದ ದೊರೆತ ಶ್ರೀಕೃಷ್ಣ ಪೂಜಾ ಪರ್ಯಾಯದಲ್ಲಿ ಚಿನ್ನದ ರಥ, ವಜ್ರಕಿರೀಟಗಳನ್ನು ಸಮರ್ಪಿಸಿ ಗುರುಗಳು ಧನ್ಯರಾದರು.

ಇಂಥಹ ಮಹಾಗುರುಗಳನ್ನು ಪಡೆದ ನಾವೇ ಧನ್ಯರು ಎಂದು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ತಿಳಿಸಿದರು.

ಅವರು ಇಂದು ಶ್ರೀ ಕೃಷ್ಣ.ಮಠದ ರಾಜಾಂಗಣದಲ್ಲಿ ನಡೆದ ಶ್ರೀಭಂಡಾರಕೇರಿ ಮತ್ತು ಶ್ರೀ ಪಲಿಮಾರು ಉಭಯ ಮಠಾಧಿಪತಿಗಳಾಗಿದ್ದ ಪ್ರಾಂತ: ಸ್ಮರಣೀಯ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರ ಆರಾಧನೆಗಾಗಿ ನಡೆದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಗುರುಗಳನ್ನು ಸ್ಮರಿಸಿದರು.

ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರು ಶ್ರೀಮದ್ಭಾಗವತದ ದಶಮಸ್ಕಂಧದ ಚಿಂತನೆಯನ್ನು ಮಾಡಿ ಶ್ರೀವಿದ್ಯಾಮಾನ್ಯರಿಗೆ ಸಮರ್ಪಿಸಿದರು. ಸಭೆಯಲ್ಲಿ ಡಾ. ಶಂಕರನಾರಾಯಣ ಅಡಿಗ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ, ವಿದ್ವಾನ್ ನಂದಿಕೂರು ಜನಾರ್ದನ ಭಟ್, ವಿದ್ವಾನ್ ಹೃಷೀಕೇಶ ಮಠದ, ಉಡುಪಿ ಇವರು ಶ್ರೀವಿದ್ಯಾಮಾನ್ಯತೀರ್ಥರ ಮಹಿಮೆಗಳನ್ನು ಮನೋಜ್ಞವಾಗಿ ವರ್ಣಿಸಿದರು. ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಅನೇಕ ವಿದ್ವಾಂಸರು ಉಪಸ್ಥಿತರಿದ್ದರು. ಡಾ.ಬಿ.ಗೋಪಾಲಾಚಾರ್ ಹಾಗೂ ಮಹಿತೋಷ ಆಚಾರ್ಯರು ಕಾರ್ಯಕ್ರಮವನ್ನು ನಿರ್ವಹಿಸಿದರು.

   

Related Articles

error: Content is protected !!