ದುಬೈ : ಆಸ್ಟ್ರೇಲಿಯಾವನ್ನು ಸ್ಪಿನ್ ಮಂತ್ರದಿಂದ ಹಣಿದ ಟೀಂ ಇಂಡಿಯಾ 9ನೇಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಬೌಲರ್‌ಗಳ ಮೊನಚು ದಾಳಿ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಸೇರಿದಂತೆ ತಾರಾ ಬ್ಯಾಟರ್‌ಗಳ ಅಭೂತಪೂರ್ವ ಆಟದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ 4 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ ಭಾರತ ಹ್ಯಾಟ್ರಿಕ್ ಫೈನಲ್‌ಗೆ ಪ್ರವೇಶಿಸಿದರೆ, ಆಸ್ಟ್ರೇಲಿಯಾದ 3ನೇ ಟ್ರೋಫಿ ಕನಸು ನುಚ್ಚುನೂರಾಯಿತು.
ದುಬೈ ಕ್ರೀಡಾಂಗಣ ಈಗ ಭಾರತದ ತವರು ಮೈದಾನ ಇದ್ದಂತೆ. ಹೀಗಾಗಿ ಬ್ಯಾಟಿಂಗ್ ಅಥವಾ ಬೌಲಿಂಗ್ ಯಾವುದೇ ಸಿಕ್ಕರೂ ಅದಕ್ಕೆ ಸಿದ್ಧವಾಗಿಯೇ ಬಂದಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾಕ್ಕೆ ಭಾರತ ಹೆಚ್ಚಿನ ರನ್ ಗಳಿಸಲು ಅವಕಾಶ ನೀಡಲಿಲ್ಲ. ಆಸೀಸ್ 49.3 ಓವರ್ ಗಳಲ್ಲಿ 264 ರನ್‌ಗೆ ಆಲೌಟಾಯಿತು.
ಭಾರತಕ್ಕೆ ಸಿಕ್ಕ ಗುರಿ ದುಬೈನಲ್ಲಿ ಸ್ಪರ್ಧಾತ್ಮಕ ಮೊತ್ತವಾಗಿತ್ತು. ಹೀಗಾಗಿ ಅಪಾಯ ತಂದೊಡ್ಡದೆ ಜವಾಬ್ದಾರಿಯುವ ಆಟ ಪ್ರದರ್ಶಿಸಿದ ಭಾರತೀಯ ಬ್ಯಾಟರ್ಸ್, 11 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲ್ಲಿಸಿದರು.

