ಧರ್ಮಶಾಲಾ : ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಪರಿಸ್ಥಿತಿ ತಲೆದೋರಿರುವ ಬೆನ್ನಲ್ಲೇ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡಿದೆ ಪಾಕಿಸ್ತಾನ ಭಾರತದ ಮೇಲೆ ದಾಳಿ ಆರಂಭಿಸಿರುವ ಕಾರಣ ಭಾರತೀಯ ಸೇನೆಯ ಸೂಚನೆ ಮೇರೆಗೆ ಪಂದ್ಯ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಗುರುವಾರ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಿಗದಿಯಾಗಿತ್ತು. ಮಳೆ ಕಾರಣಕ್ಕೆ ಪಂದ್ಯ 1.00 ಗಂಟೆ ತಡವಾಗಿ ಆರಂಭಗೊಂಡಿತು. ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ 10.1 ಓವರ್‌ಗಳಲ್ಲಿ 1 ವಿಕೆಟ್‌ಗೆ 122 ರನ್ ಗಳಿಸಿತ್ತು. ಈ ನಡುವೆ ವಾಯು ದಾಳಿ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಲೈಟ್ಸ್ ಆಫ್ : ಕ್ರೀಡಾಂಗಣದ ಲೈಟ್‌ಗಳು ಕೈಕೊಟ್ಟ ಕಾರಣ ಪಂದ್ಯ ನಿಲ್ಲಿಸಲಾಗಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ ವಾಯು ದಾಳಿ ಮುನ್ನೆಚ್ಚರಿಕೆ ಕ್ರಮವಾಗಿ ಕ್ರೀಡಾಂಗಣದ ಲೈಟ್‌ಗಳನ್ನು ಬಂದ್ ಮಾಡಲಾಗಿತ್ತು. ಕೆಲ ನಿಮಿಷಗಳ ಬಳಿಕ ಪಂದ್ಯ ಸ್ಥಗಿತಗೊಳಿಸಿದ್ದಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ

