ಕುಂದಾಪುರ : ನಗರದ ಪಡುಕೇರಿಯ ಯುವ ಮಿತ್ರ ವೃಂದ ಇದರ 30ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕ್ರೀಡೋತ್ಸವ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಶಕ್ತಿ, ಉತ್ಸಾಹ ಹಾಗೂ ಕ್ರೀಡಾ ಮನೋಭಾವವನ್ನು ಸಂಕೇತಿಸುವ ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ಶ್ರೀ ವೆಂಕಟರಮಣ ಶಾಲೆಯ ಸಂಚಾಲಕರಾದ ಶ್ರೀಯುತ ರಾಧಾಕೃಷ್ಣ ಶೆಣೈ ಉದ್ಘಾಟಿಸಿದರು.
ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ನಾಗರಾಜ ಕಾಮಧೇನು, ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಪ್ರಭಾವತಿ, ಕುಂದಾಪುರ ಪುರಸಭಾ ಅಧ್ಯಕ್ಷರಾದ ಶ್ರೀಯುತ ಮೋಹನ್ ಶೆಣೈ ಹಾಗೂ ಪಡುಕೇರಿಯ ಶ್ರೀಯುತ ರಮೇಶ ರಾವ್ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು

ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಯುವ ಮಿತ್ರ ವೃಂದದ ಅಧ್ಯಕ್ಷ ಶ್ರೀಯುತ ಅಮರ್ ಕುಮಾರ್ ಅವರ ನೇತೃತ್ವದಲ್ಲಿ ಪಡುಕೇರಿಯ ಗ್ರಾಮಸ್ಥರಿಗೆ ವಿವಿಧ ರೀತಿಯ ಕ್ರೀಡೆಗಳನ್ನು ಮತ್ತು ಮನೋರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ಕಾರ್ಯದರ್ಶಿ ಶ್ರೀಯುತ ಮಹೇಶ್, ಖಜಾಂಚಿ ಶ್ರೀಯುತ ಸಂಪತ್, ಕ್ರೀಡಾ ಕಾರ್ಯದರ್ಶಿ ಶ್ರೀಯುತ ನಾಗರಾಜ ಮೆಟ್ರೋ ಹಾಗೂ ಇನ್ನಿತರ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು
ಶ್ರೀ ಅಮರ್ ಕುಮಾರವರು ಮಾತನಾಡಿ ಕ್ರೀಡೆಗಳು ದೈನಂದಿನ ಜೀವನದಲ್ಲಿ ಆರೋಗ್ಯ, ಶಿಸ್ತು, ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ. ಒತ್ತಡ ಕಡಿಮೆ ಮಾಡಿ ಮಾನಸಿಕ ಶಕ್ತಿ ವೃದ್ಧಿಸುವುದು ಆದುದರಿಂದ ಸ್ಪರ್ಧೆಗಳು ಉತ್ಸಾಹ ಮತ್ತು ಕ್ರೀಡಾತ್ಮಕತೆಯೊಂದಿಗೆ ಮುಂದುವರಿಯಲಿ ಎಂದು ಅಭಿಪ್ರಾಯ ಪಟ್ಟರು. ಪಡುಕೇರಿ ಗ್ರಾಮದವರ ಮತ್ತು ಕ್ರೀಡೆಯಲ್ಲಿ ಭಾಗವಹಿಸಿದವರ ಉತ್ಸಾಹ ಮತ್ತು ಪ್ರೋತ್ಸಾಹ ಎಲ್ಲವೂ ಕ್ರೀಡೋತ್ಸವವನ್ನು ಯಶಸ್ವಿಗೊಳಿಸಲು ನೆರವಾಯಿತು.
ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಸೆಲ್ಫಿ ಕೌಂಟರ್ ಕ್ರೀಡಾಸ್ಫೂರ್ತಿ ಮತ್ತು ಮನೋರಂಜನೆಯ ಜೊತೆಗೆ ಪಾಲ್ಗೊಂಡ ಎಲ್ಲರಿಗೂ ಸ್ಮರಣೀಯ ಅನುಭವ ನೀಡಿತು.

