ಬೆಂಗಳೂರು : ಮುಖ್ಯಮಂತ್ರಿಗಳ ಸೂಚನೆ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ರಾಯಲ್ ಚಾಲೆಂಜರ್ಸ್‌ನ (ಆರ್‌ಸಿಬಿ) ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸೇರಿ ನಾಲ್ವರನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸಿಸಿಬಿ ಹಾಗೂ ಕೇಂದ್ರ ವಿಭಾಗದ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.
ಈ ಬಂಧನದ ಬೆನ್ನಲ್ಲೇ ರಾಜ್ಯ ಅಪರಾಧ ತನಿಖಾ ಇಲಾಖೆಗೆ ಕಾಲ್ತುಳಿತ ಪ್ರಕರಣವು ಶುಕ್ರವಾರ ಅಧಿಕೃತವಾಗಿ ವರ್ಗಾವಣೆ ಗೊಂಡಿದ್ದು, ಇನ್ನು ಮುಂದಿನ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸಲಿದ್ದಾರೆ.
ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಲ್ ಸೋಸಲೆ, ಡಿಎನ್‌ಎ ಸಂಸ್ಥೆಯ ಸುಮಂತ್, ಕಿರಣ್ ಹಾಗೂ ಸುನೀಲ್ ಮ್ಯಾಥ್ ಬಂಧಿತರು.
ಕೃತ್ಯ ಸಂಬಂಧ ಎಫ್‌ಐಆರ್ ದಾಖಲಾದ ಕೂಡಲೇ ಬೆಳಗ್ಗೆ ಹೊರ ರಾಜ್ಯಕ್ಕೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು. ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರಿಂದ ಎಲ್ಲರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದರು

