ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ದನ್ ರವರು ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಅವರಿಗೆ 76 ವರ್ಷ ವಯಸ್ಸಾಗಿತ್ತು
ಅನಾರೋಗ್ಯ ಸಮಸ್ಯೆಗೆ ತುತ್ತಾಗಿದ್ದ ಬ್ಯಾಂಕ್ ಜನಾರ್ದನ್ ಅವರು ಹಲವಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಬೆಂಗಳೂರಿನ ಸುಲ್ತಾನ್‌ಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಬ್ಯಾಂಕ್ ಜನಾರ್ದನ್ ಅವರ ಪಾರ್ಥಿವಶರೀರದ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರ ದರ್ಶನದ ನಂತರ ಸೋಮವಾರ ಸಂಜೆ 4.00 ಗಂಟೆಗೆ ಅಂತ್ಯಕ್ರಿಯೆ ನಡೆಯಿತು.
ಬ್ಯಾಂಕ್ ಜನಾರ್ದನ್ ಅವರು 2023ರ ಸೆಪ್ಟೆಂಬರ್‌ನಲ್ಲಿ ತೀವ್ರ ಹೃದಯಾಘಾತಕ್ಕೆ ಒಳ ಗಾಗಿದ್ದರು. ಆ ಸಂದರ್ಭದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಬಂದಿದ್ದರು. ಅಲ್ಲಿಂದ ಅವರ
ಆರೋಗ್ಯದಲ್ಲಿ ಏರುಪೇರಾಗುತ್ತಲೇ ಇತ್ತು. ಹಾಗಾಗಿ 2023ರಲ್ಲಿ ಬಿಡುಗಡೆಯಾಗಿದ್ದ ‘ಉಂಡೆನಾಮ ಕೊನೆಯ ಸಿನಿಮಾವಾಗಿತ್ತು.
ಹೊಳಲ್ಕೆರೆ ಮೂಲದವರು :
1949ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿ ಸಿದ ಬ್ಯಾಂಕ್ ಜನಾರ್ದನ್ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದರು. ಜೊತೆಗೆ ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್ ಎಂಬ ತಂಡದಲ್ಲಿ ನಾಟಕದಲ್ಲಿ ಪಾತ್ರ ಮಾಡುತ್ತಿದ್ದರು. ಅವರ ಅಭಿನಯದ ಯಶಸ್ವಿ ‘ಗೌಡ್ರ ಗದ್ದ’ ನಾಟಕವನ್ನು ವೀಕ್ಷಿಸಿದ ಹಿರಿಯ ನಟ ಧೀರೇಂದ್ರ ಗೋಪಾಲ್ ಅವರು ಜನಾರ್ದನ್ ಅವರನ್ನು ಸಿನಿಮಾದಲ್ಲಿ ನಟಿಸುವುದಕ್ಕೆ ಪ್ರೋತ್ಸಾಹಿಸಿದ್ದರು.

