ಬೆಂಗಳೂರು : ವಕ್ಸ್ ಆಸ್ತಿ ವಿವಾದವನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿ ಯಶಸ್ವಿಯಾಗಿದ್ದ ರಾಜ್ಯ ಬಿಜೆಪಿಯ ಭಿನ್ನಮತೀಯ ಮುಖಂಡರ ಬಣ, ಇದೀಗ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಪ್ರಜೆಗಳ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಇದು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ನಡೆಸುತ್ತಿರುವ ಪರೋಕ್ಷ ಹೋರಾಟದ ಒಂದು ಭಾಗವೇ ರಾಜ್ಯ ಬಿಜೆಪಿ ನಾಯಕತ್ವ ನಿಜವಾದ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡುತ್ತಿಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶವಿದೆ ಎನ್ನಲಾಗಿದೆ.
ಪಾಕಿಸ್ತಾನದ ನಿವಾಸಿಗಳನ್ನು ಭಾರತದಿಂದ ಖಾಲಿ ಮಾಡಿಸಲು ತೀರ್ಮಾನಿಸಿರುವ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವ ಸಲುವಾಗಿ ರಾಜ್ಯದಲ್ಲಿ ವಾರ್ ರೂಂ ಆರಂಭಿಸಲು ಬಿಜೆಪಿ ಭಿನ್ನಮತೀಯ ಮುಖಂಡರ ಬಣ ತೀರ್ಮಾನಿಸಿದೆ. ಬಿಜೆಪಿ ಚಿಹ್ನೆಯಡಿ ಹೋರಾಟ ನಡೆಸಲು ಮುಂದಾಗಿದ್ದು, ವಾರ್ ರೂಂ ಮೂಲಕ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುವವರು, ಪಾಕಿಸ್ತಾನ ಪ್ರಜೆಗಳು, ಬಾಂಗ್ಲಾದೇಶದವರ ಬಗ್ಗೆ ಸಮಗ್ರ ಮಾಹಿತಿ ಕ್ರೋಢೀಕರಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಒದಗಿಸಲು ನಿರ್ಧರಿಸಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ಜತೆ ಕೈಬಲಪಡಿಸಲು ಬಿಜೆಪಿ ಬಂಡಾಯ ನಾಯಕರ ಪಡೆ ಮುಂದಾಗಿದೆ.
ಈ ಸಂಖ್ಯೆ ಗೆ ಕರೆ ಮಾಡಿ
ರಾಜ್ಯದಲ್ಲಿ ನೆಲೆಸಿರುವ ಪಾಕ್ ಮತ್ತು ಬಾಂಗ್ಲಾದ ಅಕ್ರಮ ವಲಸಿಗರ ವಿರುದ್ಧ ಮಾಹಿತಿ ಇದ್ದರೆ 9035675734 ಮತ್ತು 8217686764 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ

