ಶಿವಮೊಗ್ಗ: ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡುವುದೇ ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯ. ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರ ‘ಜತೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ, ಚಂದ್ರ ಶೇಖರನ್ ಆತ್ಮಹತ್ಯೆ ವಿಷಯ ಒಂದು ದುರ್ದೈವದ ವಿಷಯ. ಹಲವಾರು ಅಧಿಕಾರಿಗಳ ಹೆಸರು ಬರೆದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಸಚಿವ ನಾಗೇಂದ್ರ ಅವರ ರಾಜೀನಾಮೆಯನ್ನು ಎಲ್ಲರೂ ಕೇಳುತ್ತಿದ್ದಾರೆ. ಆದರೆ ಅವರೇ ತಿಳಿದು ರಾಜೀನಾಮೆ ಕೊಡುವುದು ಸೂಕ್ತ ಎಂದು ಸಲಹೆ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 20-22 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಪರ ಒಳ್ಳೆಯ ಅಭಿಪ್ರಾಯವಿದೆ. ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆದ್ದೇ ಗೆಲ್ಲುತ್ತೇವೆ ಎಂದರು. ಮಾಜಿ ಶಾಸಕ ರಘುಪತಿ ಭಟ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅವರ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಪಕ್ಷ ಎಲ್ಲವನ್ನೂ ಅವರಿಗೆ ನೀಡಿದೆ. ಆದರೆ ಹಠಕ್ಕೆ ಬಿದ್ದು ಅವರು ಸ್ಪರ್ಧಿಸುತ್ತಿದ್ದಾರೆ ಎಂದರು