ಬೆಂಗಳೂರು : ಚಿಂತಕ ಚಕ್ರವರ್ತಿ ಸೂಲಿಬೆಲೆ ಏರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಕಿರುಕುಳಕ್ಕೆ ಮುಂದಾದರೆ ರಾಜ್ಯ ಬಿಜೆಪಿ ಸುಮ್ಮನೆ ಕೂರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಪರ ಸಂಘಟನೆಗಳು ಮುಖಂಡರು ಕಾರ್ಯಕರ್ತರನ್ನು ಗುರಿಯಾಗಿಸಿ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ನಿರಂತರ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದೆ ಎಂದಿದ್ದಾರೆ
ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಉದ್ಭವಿಸಿದ ಸಂಘರ್ಷ ಪರಿಸ್ಥಿತಿಯನ್ನು ಹತೋಟಿಗೆ ತರುವ ಬದಲು ರಾಷ್ಟ್ರವಿದ್ರೋಹಿ ಮತೀಯ ಶಕ್ತಿಗಳನ್ನು ಓಲೈಸುವ ಸಲುವಾಗಿ ಸದ್ಯ ಕೋಮು ನಿಗ್ರಹ ದಳವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾರೆ.
ಸೂಲಿಬೆಲೆ ಗುರಿಯಾಗಿಸಿಕೊಂಡು ಕಾರ್ಯಾಚರಣೆ ಆರಂಭಿಸಿರುವುದು ಪೊಲೀಸ್ ಇಲಾಖೆಯಿಂದ ಸೋರಿಕೆಯಾಗಿರುವ ದಾಖಲೆ ಹಾಗೂ ಆಡಿಯೋ ರೆಕಾರ್ಡ್ಗಳಿಂದ ಸ್ಪಷ್ಟವಾಗುತ್ತಿದೆ. ಸೂಲಿಬೆಲೆಯವರನ್ನೇ ಈ ಪರಿ ಗುರಿಯಾಗಿಸಿ ಕೊಂಡಿರುವಾಗ ಸಾಮಾನ್ಯ ಕಾರ್ಯಕರ್ತರನ್ನು ಯಾವ ಪರಿ ಕಿರುಕುಳ ನೀಡಬಹುದು ಎನ್ನುವುದು ಸೋರಿಕೆ ಆಡಿಯೋದಿಂದ ಸ್ಪಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

