ಬೆಂಗಳೂರು : ರಾಜ್ಯದಲ್ಲಿ ಬಿಪಿಎಲ್ ಕಾರ್ಡುಗಳನ್ನು ಏಕಾಏಕಿ ರದ್ದು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ಬಿಜೆಪಿ ತೀವ್ರವಾಗಿ ಟೀಕಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಹತ್ತು ಕೆ.ಜಿ. ಬೇಕೋ ಬೇಡೋ ಎಂದು ಕೇಳಿದ ಭ್ರಷ್ಟ ಸಿದ್ದರಾಮಯ್ಯ ಅವರು ಇದೀಗ 11 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಮೂಲಕ ಬಡವರ ಅನ್ನಕ್ಕೂ ಕನ್ನ ಹಾಕಿದ್ದಾರೆ. ದಿವಾಳಿ ಎದ್ದಿರುವ ಲೂಟಿಕೋರ ಕಾಂಗ್ರೆಸ್ ಸರ್ಕಾರ ಅಕ್ಕಿ ಕೊಡಲು ಕೈಲಾಗದೆ ಬಿಪಿಎಲ್ ರದ್ದು ಮಾಡಿ ಹೇಡಿತನ ಪ್ರದರ್ಶಿಸಿದೆ. ಮೊದಲು ಫ್ರೀ ಆಮೇಲೆ ಕಂಡೀಷನ್ ನಂತರ ಬ್ಯಾನ್ ಇದೇ ಕಾಂಗ್ರೆಸ್ಸಿನ ಬೋಗಸ್ ಗ್ಯಾರಂಟಿಗಳ ಅಸಲಿಯತ್ತು ಎಂದು ಬಿಜೆಪಿ ಕರ್ನಾಟಕ ಲೇವಡಿ ಮಾಡಿದೆ.
ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೇ ಭ್ರಷ್ಟಾಚಾರದಲ್ಲಿ ಮುಳುಗಿ ಬೊಕ್ತಸ ಬರಿದಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ 11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನೇ ರದ್ದು ಮಾಡಿದೆ. ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಹೋಗಿ ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಆರ್ಭಟಿಸುವ ಸಿದ್ದರಾಮಯ್ಯ ಅವರು ಪ್ರಚಾರ ಭಾಷಣ ಮುಗಿಸಿ ಮರಳುವ ಹೊತ್ತಿಗೆ ಅನರ್ಹ ಮಾನದಂಡ ಮುಂದಿಟ್ಟು 11 ಲಕ್ಷ ಜನರ ಬಿಪಿಎಲ್ ಕಾರ್ಡ್ ರದ್ದು ಮಾಡುವ ತಂತ್ರ ಕುತಂತ್ರಗಳು ದೇಶದ ಮುಂದೆ ಬಟಾ ಬಯಲಾಗುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಅನರ್ಹತೆ ಹೆಸರಿನಲ್ಲಿ ನಿಜವಾದ ಬಿಪಿಎಲ್ ಕಾರ್ಡುದಾರರ ಹಕ್ಕನ್ನು ಕಿತ್ತುಕೊಳ್ಳುವುದನ್ನು ಬಿಜೆಪಿ ಖಂಡಿಸುತ್ತದೆ. ಅನರ್ಹರನ್ನು ತಡೆಯುವ ಹೆಸರಿನಲ್ಲಿ ಬಿಪಿಎಲ್ ಕಾರ್ಡುದಾರರನ್ನು ಇಳಿಮುಖಗೊಳಿಸಿ ಭಾಗ್ಯ ಯೋಜನೆಗಳಿಗೆ ಹಣ ಹೊಂದಿಸುವ ದುರುದ್ದೇಶ ಈ ಬಿಪಿಎಲ್ ಕಾರ್ಡುದಾರರ ರದ್ದತಿಯ ಹಿಂದೆ ಅಡಗಿದೆ ಎಂದಿದ್ದಾರೆ.