ಬೆಂಗಳೂರು : ನಗರದ ಬಾಬುಸಾಪಾಳ್ಯದಲ್ಲಿ ಸಂಭವಿಸಿದ ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತ ದಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಏಳು ಕಾರ್ಮಿಕರನ್ನು ಬುಧವಾರ ಹೊರತೆಗೆಯಲಾಗಿದೆ. ಇನ್ನೂ ಇಬ್ಬರು ಅವಶೇಷಗಳಡಿ ಸಿಲುಕಿದ್ದಾರೆ.
ಹೆಣ್ಣೂರು ಸಮೀಪದ ಬಾಬುಸಾಪಾಳ್ಯದ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡದ ಕುಸಿತ ಪ್ರಕರಣದಲ್ಲಿ ಒಬ್ಬರ ಮೃತದೇಹ ಸಿಕ್ಕಿತ್ತು. ಅವಶೇಷಗಳಡಿ ಸಿಲುಕಿದ್ದ ಮತ್ತೆ ಏಳು ಮಂದಿ ಕಾರ್ಮಿಕರ ಮೃತದೇಹಗಳನ್ನು ಬುಧವಾರ ರಕ್ಷಣಾ ದಳಗಳು ಹೊರತೆಗೆದಿವೆ. ಹಾಗೆಯೇ 6 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ
ಬಿಹಾರ ಮೂಲದ ಮೊಹಮ್ಮದ್ ಸಾಹಿಲ್. (19), ಶ್ರೀರಾಮ್ ಕೃಪಾಲ್(35), ಸೋಲೋ (27), ತಮಿಳುನಾಡಿನ ಮಣಿಕಂಠನ್ (29), ಸತ್ಯರಾಜು (28), ಆಂಧ್ರಪ್ರದೇಶದ ತುಳಸಿ ರೆಡ್ಡಿ ಹಾಗೂ ಉತ್ತರಪ್ರದೇಶದ ಪುಲ್ಟನ್ ಯಾದವ್ ಅವರ ಮೃತದೇಹಗಳು ಪತ್ತೆಯಾಗಿದ್ದು, ಜಗದೇವಿ, ರಷೀದ್, ನಾಗರಾಜು, ರಮೇಶ್ ಕುಮಾರ್, ಅರ್ಮಾನ್ ಹಾಗೂ ಅಜಯ್ ಅವರನ್ನು ರಕ್ಷಿಸಲಾಗಿದೆ. ಇದುವರೆಗೆ 13 ಮಂದಿ ಕಾರ್ಮಿಕರು ಧರೆಗುರುಳಿದ ಕಟ್ಟಡದಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ. ಏಳುಮಲೈ (ತಮಿಳುನಾಡು)ಹಾಗೂಗಜೇಂದ್ರ (ಆಂಧ್ರ) ಅವರು ಅವಶೇಷಗಳಡಿ ಇನ್ನೂ ಸಿಲುಕಿದ್ದಾರೆ.

