ಬೆಂಗಳೂರು : ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬುದಾಗಿ ಬಿಜೆಪಿ ಅಪ ಪ್ರಚಾರ ನಡೆಸುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಐದು ವರ್ಷ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿ ಯೋಜನೆಯಲ್ಲಿ ತಪ್ಪುಗಳಿದ್ದರೆ ಅಥವಾ ಸರ್ಕಾರದ ಖಜಾನೆಗೆ ತೊಂದರೆಯಿದ್ದರೆ ಸರ್ಕಾರದ ಗಮನಕ್ಕೆ ತರುವುದು ಪ್ರತಿಪಕ್ಷಗಳ ಕೆಲಸ. ವಿಪಕ್ಷ ರಾಜಕೀಯ ಪ್ರೇರಿತ ಆರೋಪ ಮಾಡಬಾರದು. ಯೋಜನೆಗಳ ಬಗ್ಗೆ ಸಕಾರಾತ್ಮಕ ಟೀಕೆಗಳನ್ನು ಮಾಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದರು.
ಯೋಜನೆಗಳಿಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ ನೇರವಾಗಿ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪುತ್ತಿದೆ. ಗ್ಯಾರಂಟಿ ಟೀಕೆ ಮಾಡುವ ಬಿಜೆಪಿ ಅವುಗಳನ್ನೇ ಕಾಪಿ (ನಕಲು) ಮಾಡಿ ಲೋಕಸಭೆ ಚುನಾವಣೆ ವೇಳೆ ಮೋದಿ ಕಿ ಗ್ಯಾರಂಟಿ ಎಂದು ನೀಡಿತು. ಅಲ್ಲದೇ, ಬಿಜೆಪಿ ಸರ್ಕಾರ ಇರುವ ರಾಜ್ಯದಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿರುಗೇಟು ನೀಡಿದರು

