ಬೆಂಗಳೂರು : ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ತೊರೆದು ಬುಧವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಇಂದೇ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ಆಗಲು ಅವಕಾಶವಿಲ್ಲ ಎಂಬುದು ಅರಿವಾಗುತ್ತಿದ್ದಂತೆಯೇ ಬಿಜೆಪಿಯ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯೋಗೇಶ್ವರ್ ತಮ್ಮ ಮುಂದಿನ ನಡೆ ಬಗ್ಗೆ ತೀವ್ರ ಕುತೂಹಲ ಹುಟ್ಟಿಸಿದ್ದರು. ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆಂಬ ಬಗ್ಗೆ ಕಡೆ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡಿದ್ದ ಅವರು, ಮಂಗಳವಾರ ತಡರಾತ್ರಿ ಡಿ.ಕೆ. ಸಹೋದರರ ಕಾರ್ಯಾಚರಣೆ ನಂತರ ಕೈ ಪಾಳೆಯ ಸೇರಲು ನಿರ್ಧರಿಸಿದರು. ತನ್ಮೂಲಕ ಚನ್ನಪಟ್ಟಣ ರಾಜಕೀಯ ಗೊಂಬೆಯಾಟಕ್ಕೆ ಕುತೂಹಲಕಾರಿ ತಿರುವು ನೀಡಿದರು. ಬುಧವಾರ ಬೆಳಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಜತೆ ಡಿ. ಕೆ ಶಿವಕುಮಾರ್ ಭೇಟಿ ಮಾಡಿದ ಅವರು, ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ನಂತರ ಶಿವಕುಮಾರ್ ಜತೆಯಲ್ಲೇ ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಿ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಪಡೆದು ಕಾಂಗ್ರೆಸ್ ಬಾವುಟ ಹಿಡಿಯುವ ಮೂಲಕ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು. ತನ್ಮೂಲಕ 2004 ಹಾಗೂ 2008ರಲ್ಲಿ ಕಾಂಗ್ರೆಸ್‌ನಿಂದಲೇ ಶಾಸಕರಾಗಿದ್ದ ಮಾಜಿ ಕಾಂಗ್ರೆಸ್ಸಿಗ ಯೋಗೇಶ್ವರ್ ಮತ್ತೆ ‘ಕೈ’ ಪಾಳೆಯಕ್ಕೆ ವಾಪಸಾಗಿದ್ದಾರೆ.
ಎಐಸಿಸಿಯಿಂದ ಅಭ್ಯರ್ಥಿ ಹೆಸರು ಪ್ರಕಟ ಒಂದೇ ಬಾಕಿಯಿದ್ದು, ಗುರುವಾರ ಯೋಗೇಶ್ವರ್ ನಾಮಪತ್ರ ಸಲ್ಲಿಕೆ ಬಹುತೇಕ ಅಂತಿಮವಾಗಿದೆ. ಪಕ್ಷ ಸೇರ್ಪಡೆಗೆ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿ ಪಕ್ಷದೊಂದಿಗಿನ ಸಂಬಂಧ ಕಡಿದುಕೊಂಡರು ಎಂದು ತಿಳಿದುಬಂದಿದೆ.
ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವೇಳೆ ಸಚಿವರಾದ ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಡಾ.ಎಂ.ಸಿ.ಸುಧಾಕರ್, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಉದಯ್ ಸೇರಿ ಹಲವರು ಹಾಜರಿದ್ದರು.