ಬೆಂಗಳೂರು : ಅಕ್ರಮ ಆನ್‌ಲೈನ್ ಹಾಗೂ ಆಫ್ ಲೈನ್ ಬೆಟ್ಟಿಂಗ್ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಭರ್ಜರಿ ಬೇಟೆ ಆಡಿದ್ದು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರನ್ನು ಸಿಕ್ಕಿಂ ರಾಜ್ಯದ ರಾಜಧಾನಿ ಗ್ಯಾಂಗ್ಟಕ್‌ನಲ್ಲಿ ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಶುಕ್ರವಾರ ನಡೆದ ಇ.ಡಿ.ದಾಳಿ ವೇಳೆ ಕೆ.ಸಿ.ವೀರೇಂದ್ರ ಮನೆಯಲ್ಲಿರಲಿಲ್ಲ. ಕೆ.ಸಿ.ವೀರೇಂದ್ರ ಅವರು ತನ್ನ ಸಹಚರರೊಂದಿಗೆ ಕ್ಯಾಸಿನೋ ಗುತ್ತಿಗೆ ಪಡೆಯುವ ಸಂಬಂಧ ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ಗೆ ತೆರಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.
ಇದರ ಬೆನ್ನಲ್ಲೇ ಕೆ.ಸಿ.ವೀರೇಂದ್ರ ಅವರನ್ನು ಗ್ಯಾಂಗ್ಟಕ್‌ನಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪ ಡಿಸಿದ್ದರು. ಶನಿವಾರ ಅಧಿಕೃತವಾಗಿ ಕೆ.ಸಿ.ವೀರೇಂದ್ರ ಅವರನ್ನು ಬಂಧಿಸಿರುವ ಇ.ಡಿ.ಅಧಿಕಾರಿಗಳು ಬಳಿಕ ಗ್ಯಾಂಗ್ಟಕ್‌ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ಯವ ಸಂಬಂಧ ನ್ಯಾಯಾಲಯದಿಂದ ಟ್ರಾನ್ಸಿಟ್ ವಾರೆಂಟ್ ಪಡೆದು ವಿಮಾನದ ಮೂಲಕ ಬೆಂಗಳೂರಿಗೆ ಕರೆತರುವ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಬಳಿಕ ಆರೋಪಿ ಕೆ.ಸಿ.ವೀರೇಂದ್ರ ಅವರನ್ನು ಇ.ಡಿ.ಕಚೇರಿಗೆ ಕರೆದೊಯ್ದು ಭಾನುವಾರ ಬೆಳಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿದ್ದಾರೆ.

