ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಚರ್ಚೆ ನಡೆಯುತ್ತಿರುವ ನಡುವೆಯೇ, ‘ಮುಂದಿನ ವರ್ಷವೂ ನಾನೇ ಬಜೆಟ್ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿಗಳು ವಿಧಾನ ಪರಿಷತ್‌ನಲ್ಲಿ ನೀಡಿದ ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ ಹಾಗೆಯೇ ರಾಜ್ಯ ರಾಜಕೀಯದಲ್ಲೂ ಸಂಚಲನ ಮೂಡಿಸಿದೆ.
ಕೆಳಮನೆಯಲ್ಲಿ ಇತ್ತೀಚೆಗೆ ಐದು ವರ್ಷಕ್ಕೂ ತಾವೇ ಮುಖ್ಯಮಂತ್ರಿ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ಇದೀಗ ಪರಿಷತ್ತಿನಲ್ಲಿ ಮುಂದಿನ ವರ್ಷ ಬಜೆಟ್ ಮಂಡಿಸುವ ವಿಚಾರ ಪ್ರಸ್ತಾಪಿಸಿದಾಗ ಬಿಜೆಪಿ ಸದಸ್ಯರು ತೀವ್ರ ಚರ್ಚೆಗೆ ಇಳಿದರು.
ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು., ‘ಅಲ್ಲಿಯವರೆಗೂ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನಿಮ್ಮವರು ಬಿಡ್ತಾರಾ ?’ ಎಂದು ಛೇಡಿಸಿದರು.
ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಛಲವಾದಿ, ನಾರಾಯಣಸ್ವಾಮಿಗೆ ನಾನು ಮುಂದಿನ ವರ್ಷವೂ ಬಜೆಟ್ ಮಂಡಿಸಬೇಕೆಂಬ ಆಸೆ ಇದೆಯೋ, ಇಲ್ಲೋ ? ಎಂದರು. ಅದಕ್ಕೆ ನಾರಾಯಣಸ್ವಾಮಿ, ‘ನನಗೇನೋ ಇದೆ, ಆದರೆ ನಿಮ್ಮವರಿಗೂ ಇರಬೇಕಲ್ವಾ?’ ಎಂದು ತಿರುಗೇಟು ನೀಡಿದರು.
ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನನ್ನ ಕಟ್ಟಾ ರಾಜಕೀಯ ವಿರೋಧಿಯಾದ ನಿಮಗೆ ಆಸೆ ಇದ್ದ ಮೇಲೆ ನಮ್ಮವರಿಗೂ ಆಸೆ ಇರುತ್ತದೆ ಬಿಡಿ ಎಂದರು.

