ಬೆಂಗಳೂರು: ‘ರಾಜ್ಯಪಾಲರಿಗೆ ಯಾವ ರೀತಿಯ ಬೆದರಿಕೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಅವರು ರಕ್ಷಣೆ ಬೇಕೆಂದು ಕೇಳಿದ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲಾಗಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯಪಾಲರಿಗೆ ಬೆದರಿಕೆ ಇದೆ ಎಂಬ ಸನ್ನಿವೇಶವನ್ನು ಬಿಜೆಪಿಯವರು ಸೃಷ್ಟಿ ಮಾಡಿದ್ದಾರೆ. ಬಿಜೆಪಿಯವರ ಇತ್ತೀಚಿನ ಬೆಳವಣಿಗೆಗಳೇ ಇದಕ್ಕೆ ಕಾರಣ’ ಎಂದರು. ಇದೇ ವೇಳೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದವರು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸುವ ಬದಲು ಪ್ರಕರಣದ ತನಿಖೆ ನಡೆಸುತ್ತಿರುವ ದೇಸಾಯಿ ಆಯೋಗಕ್ಕೆ ಮಾಹಿತಿ ನೀಡಲಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತೀರುಗೇಟು ನೀಡಿದರು.