ರಾಮನಗರ : ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆಯನ್ನು ದಿವಾಳಿ ಎಬ್ಬಿಸಿದೆ. ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಹಣವಿಲ್ಲ ಆದರೆ ಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡ ಅವರು ಆರೋಪಿಸಿದರು
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸಿದ ಅವರು; ಕಾಂಗ್ರೆಸ್ ಸರಕಾರ ಅಪರಿಮಿತವಾಗಿ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ. ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು ಕೂಡ ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಈ ಸರ್ಕಾರ ದಿವಾಳಿಯಾಗಿದೆ. ಚುನಾವಣೆ ಮುಗಿದ ಮೇಲೆ ಹಣ ಜಮೆ ಮಾಡುವುದನ್ನು ಮತ್ತೆ ನಿಲ್ಲಿಸುತ್ತಾರೆ. ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಕಸಿದುಕೊಂಡು ಹೋಗಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಕಾಸಿಲ್ಲ ಜನ ಉಗಿಯುತ್ತಿದ್ದಾರೆ ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರಾದ ಸಮೃದ್ಧಿ ಮಂಜುನಾಥ್, ಶರಣುಗೌಡ ಕಂದಕೂರ್ ಸೇರಿದಂತೆ ಸ್ಥಳೀಯ ಮುಖಂಡರು ಅನೇಕರು ಮಾಜಿ ಪ್ರಧಾನಿಗಳ ಜತೆಯಲ್ಲಿ ಇದ್ದರು.