ಕಲಬುರಗಿ : ಕುಂಭ ಮೇಳದ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಹೊಟ್ಟೆ ತುಂಬುವುದಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಇಡೀ ಹಿಂದೂ ಧರ್ಮಕ್ಕೆ ಅಪಮಾನ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಹೇಳಿಕೆಯಿಂದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನಸ್ಥಿತಿ ಹಾಗೂ ಅವರ ಸಂಸ್ಕೃತಿ ಎತ್ತಿ ತೋರಿಸುತ್ತದೆ. ಮುಸ್ಲಿಮರು ಅವರ ಪವಿತ್ರ ಸ್ಥಾನವಾದ ಮೆಕ್ಕಾಗೆ ಹೋಗುತ್ತಾರೆ. ಅದೇ ರೀತಿ ಕ್ರಿಶ್ಚಿಯನ್ ಧರ್ಮದವರು ಇಟಲಿಗೆ ಹೋಗಿ ಅವರ ಧರ್ಮಗುರು ಪೋಪ್ ಅವರನ್ನು ಭೇಟಿಯಾಗುತ್ತಾರೆ. ಇವರುಗಳನ್ನು ಖರ್ಗೆ ಅವರು ಏಕೆ ಪ್ರಶ್ನೆ ಮಾಡುವುದಿಲ್ಲ ಎಂದ ಅವರು, ಪ್ರಶ್ನೆ ಮಾಡಿದರೇ ಅವರ ಅಸ್ತಿತ್ವವೇ ಉಳಿಯುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಕೇವಲ ಹಿಂದೂ ಧರ್ಮದ ಆಚಾರ ವಿಚಾರ ಗಳಿಗೆ ದಕ್ಕೆ ತರುವುದು ಬಿಟ್ಟರೆ ಬೇರೇನೂ ಮಾಡುವು ದಿಲ್ಲ. ಮುಸ್ಲಿಂ ತುಷ್ಟಿಕರಣ ಕಾಂಗ್ರೆಸ್ ಹುಟ್ಟು ನೀತಿಯಾಗಿದೆ. ಕುಂಭ ಮೇಳದ ಸಂಗಮದಲ್ಲಿ ಸ್ಥಾನ ಮಾಡುವುದು ಹಿಂದುಗಳ ಆಸ್ಥಾವಾಗಿದ್ದು, ಹಿಂದುಗಳ ಆಸ್ಥಾ ನಂಬಿಕೆ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಹಿಂದು ಧರ್ಮಕ್ಕೆ ಹಾಗೂ ಹಿಂದುಗಳಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.