ಮೈಸೂರು : ಬಿಜೆಪಿ-ಜೆಡಿಎಸ್ನ ಪಾದಯಾತ್ರೆ ಮೈಸೂರು ನಗರ ತಲುಪುವ ಒಂದು ದಿನ ಮೊದಲೇ ‘ಬೃಹತ್ ಜನಾಂದೋಲನ ಸಮಾವೇಶ’ ನಡೆಸುವ ಮೂಲಕ ದೋಸ್ತಿ ಪಕ್ಷಗಳಿಗೆ ಟಕ್ಕರ್ ನೀಡಲು ಕಾಂಗ್ರೆಸ್ ಪಕ್ಷ ವೇದಿಕೆ ಸಜ್ಜುಗೊಳಿಸಿದೆ.
ಇಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯ ಲಿರುವ ಸಮಾವೇಶದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಸೇರಿಸಿ ಶಕ್ತಿ ಪ್ರದರ್ಶನ ನಡೆಸಲಿದೆ. ಬೃಹತ್ ಜನ ಸಾಗರದ ಮುಂದೆ ಮುಡಾ ಕುರಿತು ಸ್ಪಷ್ಟನೆ ನೀಡುವ ಜತೆಗೆ ಬಿಜೆಪಿ- ಜೆಡಿಎಸ್ ಕಾಲದಲ್ಲಿ ನಡೆದಿದ್ದವು ಎನ್ನಲಾದ 25ಕ್ಕೂಹೆಚ್ಚುಹಗರಣ ಹಾಗೂ ಭ್ರಷ್ಟಾಚಾರಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲು ಕೈ ಪಾಳೆಯ ಸಿದ್ಧತೆ ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಉಪ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್, ಸಚಿವರು ಸೇರಿದಂತೆ ಎಲ್ಲಾ ನಾಯಕರೂ ಭಾಗವಹಿಸಲಿದ್ದಾರೆ.