ಬೆಂಗಳೂರು : ಡೀಸೆಲ್ ದರ ಇಳಿಸಬೇಕು ಎಂಬುದು ಸೇರಿ 5 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರು ಮಂಗಳವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಮೊದಲ ದಿನ ಬಹುತೇಕ ಯಶಸ್ವಿಯಾಗಿದೆ. ಇದರಿಂದಾಗಿ 6 ಲಕ್ಷಕ್ಕೂ ಹೆಚ್ಚು ಲಾರಿ, ಗೂಡ್ಸ್ ವಾಹನಗಳು ರಸ್ತೆಗೆ ಇಳಿಯದ ಕಾರಣ ರಾಜ್ಯಾದ್ಯಂತ ಸರಕು-ಸಾಗಣೆ ಅಸ್ತವ್ಯಸ್ತಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಷ್ಕರಕ್ಕೆ ಕರೆ ನೀಡಿರುವ ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಮುಖಂಡರೊಂದಿಗೆ ಸಂಧಾನ ಮಾತುಕತೆ ನಡೆಸಿದರಾದರೂ ಅದು ವಿಫಲವಾಯಿತು.
ಸ್ಪಷ್ಟ ಭರವಸೆ ನೀಡದ ಸಿಎಂ:
ಮುಷ್ಕರ ಆರಂಭವಾಗುವವರೆಗೆ ಸುಮ್ಮನಿದ್ದ ಸರ್ಕಾರ ಮಂಗಳವಾರ ಲಾರಿ ಮಾಲೀಕರ ಮನವೊಲಿಸುವ ಕೆಲಸ ಮಾಡಿತ್ತು. ಮಂಗಳವಾರ ಮಧ್ಯಾಹ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಸೇರಿ ಇನ್ನಿತರ ಪ್ರಮುಖರೊಂದಿಗೆ ಸಭೆ ನಡೆಸಿದರು. ಆದರೆ, ಸಭೆಯಲ್ಲಿ ಡೀಸೆಲ್ ಬೆಲೆ ಇಳಿಕೆ, ರಾಜ್ಯ ಹೆದ್ದಾರಿ ಟೋಲ್ ರದ್ದು ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆ ಕುರಿತು ಯಾವುದೇ ಸಮರ್ಪಕ ಭರವಸೆಯನ್ನು ರಾಮಲಿಂಗಾರೆಡ್ಡಿ ನೀಡಲಿಲ್ಲ.ಅಂತಿಮವಾಗಿಸಿಎಂಸಿದ್ದರಾಮಯ್ಯ ಅವರೇ ಮಾತುಕತೆ ನಡೆಸುವುದಾಗಿ ಲಾರಿ ಮಾಲೀಕರಿಗೆ ರಾಮಲಿಂಗಾರೆಡ್ಡಿ ತಿಳಿಸಿದರು

