Home » ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಙೆ ಅಸ್ತ್ರ
 

ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಙೆ ಅಸ್ತ್ರ

by Kundapur Xpress
Spread the love

ಬೆಂಗಳೂರು : ಸಾಲಗಾರರ ಶೋಷಣೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಮೂಗುದಾರ ಹಾಕಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ ಸಾಲ ವಸೂಲಿ ನೆಪದಲ್ಲಿ ಸಾಲಗಾರರಿಗೆ ಕಿರುಕುಳ ನೀಡುವುದನ್ನು ತಡೆಯಲು ಹಾಗೂ ಬಲವಂತದ ಸಾಲ ವಸೂಲಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅನುವಾಗುವಂತೆ  ಕರ್ನಾ ಟಕ ರಾಜ್ಯ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕಾಯಿದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಶನಿವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಆರ್‌ಬಿಐ ಪ್ರಾದೇಶಿಕ ವಲಯದ ಅಧಿಕಾರಿಗಳು ಹಾಗೂ ನಬಾರ್ಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಿಕ ಕಾನೂನು, ಗೃಹ ಹಾಗೂ ಕಂದಾಯ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ಆಂಧ್ರಪ್ರದೇಶದಲ್ಲಿ 2011ರಲ್ಲಿ ಜಾರಿಗೆ ತಂದಿರುವ ಆಂಧ್ರಪ್ರದೇಶ ಮೈಕ್ರೋ ಫೈನಾನ್ಸ್ ನಿಯಂತ್ರಣ ಕಾಯ್ದೆಯಂತೆ ರಾಜ್ಯದಲ್ಲೂ ಪ್ರಬಲ ಕಾನೂನು ರಚನೆಗೆ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಕರಡು ನಿಯಮಾವಳಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದು, ಆಂಧ್ರಪ್ರದೇಶದ ಕಾನೂನು ಅಧ್ಯಯನ ನಡೆಸಿ ಹಣಕಾಸು ಇಲಾಖೆ, ಗೃಹ, ಕಂದಾಯ ಹಾಗೂ ಕಾನೂನು ಇಲಾಖೆಗಳ ಅಧಿಕಾರಿಗಳು ಸೇರಿ ಕಾಯಿದೆ ಅಂತಿಮಗೊಳಿಸಬೇಕು. ಮುಂಬರುವ ಸಚಿವ ಸಂಪುಟ ಸಭೆಯಲ್ಲೇ ಮಂಡಿಸಿ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಮೂಲಗಳು ತಿಳಿಸಿವೆ

 

Related Articles

error: Content is protected !!