ಬೆಂಗಳೂರು : ಬಾಲ್ಯ ವಿವಾಹ ಮಾತ್ರವಲ್ಲ, ಬಾಲ್ಯ ನಿಶ್ಚಿತಾರ್ಥ ಮಾಡುವವರನ್ನೂ ಶಿಕ್ಷೆಗೊಳಪಡಿಸುವ ತಿದ್ದುಪಡಿ ವಿಧೇಯಕ, ರಾಜ್ಯಾದ್ಯಂತ ಹೊಸ ಬಹುಮಹಡಿ ಕಟ್ಟಡಗಳಿಗೆ ಶೇ.1ರಷ್ಟು ಅಗ್ನಿ ಸುರಕ್ಷತಾ ಕರ (ಫೈರ್ ಸೆಸ್) ವಿಧಿಸುವ ತಿದ್ದುಪಡಿ ವಿಧೇಯಕ ಸೇರಿ 11 ತಿದ್ದುಪಡಿ ಮಸೂದೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಅವನ್ನು ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಸಭೆಯ ನಿರ್ಣಯಗಳಬಗ್ಗೆ ವಿವರಣೆ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ಈವರೆಗಿನ ಕಾಯ್ದೆಯಲ್ಲಿ ಬಾಲ್ಯ ವಿವಾಹವನ್ನು ಶಿಕ್ಷಾರ್ಹ ಅಪರಾಧ ಎಂದು ತಿಳಿಸಲಾಗಿದೆ. ಬಾಲ್ಯ ವಿವಾಹ ಮಾಡಿದ ವಧು, ವರರ ಕುಟುಂಬದವರು ಶಿಕ್ಷೆಗೆ ಗುರಿಯಾಗುತ್ತಾರೆ. ಇದೀಗ ಅಂತಹ ವಿವಾಹಗಳನ್ನು ನಿಶ್ಚಯ ಮಾಡುವವರನ್ನೂ ಶಿಕ್ಷೆಗೆ ಒಳಪಡಿಸಲು ಅವಕಾಶ ನೀಡಿ ಬಾಲ್ಯ ವಿವಾಹ ನಿಷೇಧ ಕರ್ನಾಟಕ ತಿದ್ದುಪಡಿ) ವಿಧೇಯಕ-2025 ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂಡಿಸಿದ ಈ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು. ನಿಶ್ಚಿತಾರ್ಥ ಪ್ರಕ್ರಿಯೆಯಲ್ಲಿ ಭಾಗಿಯಾದವರು, ಸಮಾರಂಭಕ್ಕೆ ಬಂದವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ.

