ಕೊಪ್ಪಳ : ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಿಟ್ಟ 25,426 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದೆ. ಇದನ್ನು ದಲಿತರ ಅಭಿವೃದ್ಧಿಗೆ ನೀಡಬೇಕು. ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಕೊಪ್ಪಳ ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿ ನೆಪದಲ್ಲಿ ದಲಿತರಿಗೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಂಡಿದೆ. ಈ ಸಲದ ಬಜೆಟ್‌ನಲ್ಲಿಯೂ ಅದೇ ರೀತಿ ಮಾಡಿದರೆ ನ್ಯಾಯಾಲಯದ ಕಟಕಟೆಗೆ ನಿಲ್ಲಿಸಲಾಗುವುದು ಎಂದರು.
ಪರಿಶಿಷ್ಟರ ಹಣದಲ್ಲಿಯೇ ಸಾಮಾನ್ಯ ವರ್ಗದವರಿಗೂ ಸೌಲಭ್ಯ ನೀಡಿದೆ. ಹಿಂದಿನ ಎರಡೂ ವರ್ಷ ಬಳಕೆ ಮಾಡಿದ ದಲಿತರ ಹಣ ವಾಪಸ್ ದಲಿತರ ಅಭಿವೃದ್ಧಿ ಯೋಜನೆಗಳಿಗೆ ಕೊಡಬೇಕು. ಸಿದ್ದರಾಮಯ್ಯ ಅವರಿಗೆ ಕೇಂದ್ರದಲ್ಲಿ ರಾಜ್ಯದ ಪಾಲು ಪಡೆಯುವ ತಾಕತ್ತು ಇಲ್ಲ. ಪೋಸ್ಟ್‌ಮನ್‌ಗಳ ಮೂಲಕ ಹಣ ಕೇಳುವ ಬದಲು ತಾವೇ ನೇರವಾಗಿ ಕೇಂದ್ರವನ್ನು ಸಂಪರ್ಕಿಸಿ ಹಣ ಕೇಳಬೇಕು ಎಂದರು.
ಈ ಸರ್ಕಾರ ದಲಿತರಿಗೆ ಗ್ಯಾರಂಟಿ ಯೋಜನೆಗಳಿಗೆ ಪ್ರತ್ಯೇಕ ಹಣವೇ ಕೊಟ್ಟಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ದಲಿತರಿಗೆ ಸಾಕಷ್ಟು ಅನ್ಯಾಯ ಮಾಡುತ್ತಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ದಲಿತ ನಾಯಕರು ಸುಮ್ಮನಿದ್ದಾರೆ ಎಂದು ಆರೋಪಿಸಿದರು.

