Home » ತಿಮರೋಡಿ ಮನೆಗೆ ಪೊಲೀಸ್‌ ದಾಳಿ
 

ತಿಮರೋಡಿ ಮನೆಗೆ ಪೊಲೀಸ್‌ ದಾಳಿ

8 ಗಂಟೆ ಎಸ್‌ ಐ ಟಿ ತೀವ್ರ ಶೋಧ

by Kundapur Xpress
Spread the love

ಮಂಗಳೂರು : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸಹೋದರ ಮೋಹನ್ ಕುಮಾ‌ರ್ ಶೆಟ್ಟಿ ಅವರ ಮನೆಗೆ ಮಂಗಳವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ತೆರಳಿ, ಸುಮಾರು 8 ತಾಸು ಶೋಧ ಕಾರ್ಯ ನಡೆಸಿತು. ಈ ವೇಳೆ ಚಿನ್ನಯ್ಯನನ್ನೂ ಕರೆದುಕೊಂಡು ಹೋಗಿದ್ದು, ಆತನ ಬಟ್ಟೆ, ಮೊಬೈಲ್ ಫೋನ್ ಹಾಗೂ ಸಿಸಿ ಕ್ಯಾಮೆರಾ ಪೂಟೇಜ್ ಅನ್ನು ತಂಡ ಮನೆಯಿಂದ ವಶಕ್ಕೆ ತೆಗೆದುಕೊಂಡಿದೆ.

ವಿಚಾರಣೆ ವೇಳೆ ಚಿನ್ನಯ್ಯ ತಾನು ತಿಮರೋಡಿ ಮನೆಗೆ ಭೇಟಿ ನೀಡಿರುವ ಮಾಹಿತಿ ಯನ್ನು ಎಸ್‌ಐಟಿಗೆ ನೀಡಿದ್ದ. ತನಿಖೆ ಆರಂಭವಾದ ಬಳಿಕ, ಎಸ್‌ಐಟಿ ಕಚೇರಿಗೆ ವಕೀಲರ ಜತೆ ಬರುತ್ತಿದ್ದ ಚಿನ್ನಯ್ಯ, ಸಂಜೆ ತಿಮರೋಡಿ ನಿವಾಸಕ್ಕೆ ತೆರಳಿ, ಮರುದಿನ ಅಲ್ಲಿಂದಲೇ ಬರುತ್ತಿದ್ದ. ಆದರೆ, ಆತ ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದ ಎಂದು ಪ್ರಚಾರದಲ್ಲಿತ್ತು. ಜೊತೆಗೆ, ತಿಮರೋಡಿ ಆಪ್ತರಿಗೆ ಸೇರಿದ ಕಾರಿನಲ್ಲಿ ಚಿನ್ನಯ್ಯ ಬಂದು ಹೋಗುತ್ತಿದ್ದ. ಈ ಮಧ್ಯೆ, ಸುಜಾತಾ ಭಟ್ ಅವರು ಕೆಲ ದಿನಗಳ ಹಿಂದೆ ತಿಮರೋಡಿ ನಿವಾಸಕ್ಕೆ ಭೇಟಿ ನೀಡಿದ ವಿಚಾರವೂ ಎಸ್‌ಐಟಿಗೆ ಸಿಕ್ಕಿತ್ತು. 

ಹೀಗಾಗಿ, ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಕೋರ್ಟ್‌ನಿಂದ ಸರ್ಚ್ ವಾರಂಟ್ ಪಡೆದು ಮಂಗಳವಾರ ಬೆಳಗ್ಗೆ 9.00 ಗಂಟೆ ಸುಮಾರಿಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ತೆರಳಿ, ದಿಢೀರ್ ಶೋಧ ಕಾರ್ಯ ಕೈಗೊಂಡರು.

ಈ ವೇಳೆ ದೂರುದಾರ ಚಿನ್ನಯ್ಯನನ್ನೂ ಕರೆದುಕೊಂಡು ಹೋಗಿದ್ದರು. ಎಸ್‌ಎಫ್‌ಎಲ್ ವಿಭಾಗದ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳ ತಂಡವೂ ಜೊತೆಯಲ್ಲಿತ್ತು. ಈ ವೇಳೆ ತಿಮರೋಡಿ ನಿವಾಸದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 

Related Articles

error: Content is protected !!