ಹೊಸದಿಲ್ಲಿ : ಕರ್ನಾಟಕ ಗೃಹಮಂತ್ರಿ ಜಿ.ಪರಮೇಶ್ವರ ಪ್ರಜ್ಞಾವಂತ, ಪ್ರಬುದ್ಧ ರಾಜ ಕಾರಣಿ ಅವರೂ ರಾಹುಲ್ ಗಾಂಧಿಯಂತೆ ಮಾತನಾಡಿದರೆ ಹೇಗೆ ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಸಂಸತ್ ಚಳಿಗಾಲದ ಅಧಿವೇಶನಕ್ಕೂ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಪರಮೇಶ್ವರ್ ಒಬ್ಬ ಪ್ರಬುದ್ಧ ರಾಜಕಾರಣಿ ಇದ್ದಾರೆ. ಅವರೂ ಹೀಗೆ ಇವಿಎಂ ಮೇಲೆ ಅನುಮಾನವಿದೆ ಎನ್ನುವುದು ಸರಿ ಕಾಣುವುದಿಲ್ಲ ಎಂದು ಜೋಶಿ ಪ್ರತಿಕ್ರಿಯಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 135 ಸೀಟುಗಳಿಂದ ಗೆದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಇವರಿಗೆ ಆಗ ಇಲ್ಲದ ಇವಿಎಂ ಮೇಲಿನ ಅನುಮಾನ ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಾಕ್ಷಣ ಬರುತ್ತದೆ ಎಂದರೆ ಹೇಗೆ ? ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ ಇವಿಎಂ ಗೋಲ್ ಮಾಲ್ ಆಗಿದೆ ಎಂಬ ಗೃಹ ಸಚಿವ ಪರಮೇಶ್ವರ್ ಅವರ ಆರೋಪವನ್ನು ತಳ್ಳಿಹಾಕಿದ ಕೇಂದ್ರ ಸಚಿವ ಜೋಶಿ, ಇವಿಎಂ ದೋಷದಿಂದಲೇ ಮಹಾರಾಷ್ಟ್ರ ಚುನಾವಣೆಯನ್ನು ಕಾಂಗ್ರೆಸ್ ಸೋತಿದೆ ಎಂದಿರುವ ಅವರ ಹೇಳಿಕೆ ನಿಜಕ್ಕೂ ಅರ್ಥಹೀನ ಎಂದು ಟೀಕಿಸಿದರು.
ಮಹಾರಾಷ್ಟ್ರ ಸೋಲಿಗೆ ಇವಿಎಂ ದೋಷ ಎನ್ನುವುದಾದರೆ ಕಾಂಗ್ರೆಸ್ ಜಾರ್ಖಂಡ್ ನಲ್ಲಿ ಹೇಗೆ ಗೆದ್ದಿತು ? ಎಂದು ಪ್ರಶ್ನಿಸಿದ ಸಚಿವ ಜೋಶಿ, ಸೋತ ಕಾರಣಕ್ಕೆ ಈ ರೀತಿ ಅಪ್ರಬುದ್ಧರಂತೆ ಮಾತಾಡಬಾರದು ಎಂದರು.