ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು * ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ. ಕೊಲೆ ಪ್ರಕರಣದ ಸಂಬಂಧ ದರ್ಶನ್ ಗ್ಯಾಂಗ್ ಅನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಶನಿವಾರ ನಗರದ ಎಸಿಎಂಎ ನ್ಯಾಯಾಲಯವು ಆದೇಶಿಸಿತ್ತು. ಹೀಗಾಗಿ ನ್ಯಾಯಾಲಯದಲ್ಲಿ ಜಾಮೀನು ಪಡೆಯುವವರೆಗೆ ದರ್ಶನ್ ಗ್ಯಾಂಗ್ಗೆ ಸೆರೆಮನೆ ವಾಸ ಮುಂದುವರೆಯಲಿದ್ದು, ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆಯಲು ನಟ ದರ್ಶನ್ ಅವರಿಗೆ ನ್ಯಾಯಾಲಯ ಅನುಮತಿ ನೀಡಿಲ್ಲ.ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸೆಲ್ನಲ್ಲಿ ದರ್ಶನ್ ಇದ್ದು, ಮಹಿಳಾವಿಭಾಗದಲ್ಲಿ ಅವರ ಪ್ರಿಯತಮೆ ಪವಿತ್ರಾಗೌಡ ಇದ್ದಾರೆ. ಇನ್ನುಳಿದ ಸಹಚರರು ವಿಚಾರಣಾಧೀನ ಕೈದಿಗಳವಿಭಾಗದಲ್ಲಿ ಪ್ರತ್ಯೇಕವಾಗಿ ಬಂಧನದಲ್ಲಿದ್ದಾರೆ. ಮೊದಲ ದಿನ ಭಾನುವಾರ ಸಹಚರರ ಜತೆ ಮಾತನಾಡುತ್ತಾ ದರ್ಶನ್ ಕಾಲ ಕಳೆದಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಜೈಲಿನಲ್ಲಿ ವಿಚಾರಣಾಧೀನಕೈದಿಗಳಿಗೆ ವಿತರಿಸಿದ ಚಪಾತಿ, ಅನ್ನ, ಸಾಂಬಾರ್ ಹಾಗೂ ಮಜ್ಜಿಗೆಯನ್ನೇ ದರ್ಶನ್ ಕೂಡ ಸೇವಿಸಿದ್ದಾರೆ.ಜೈಲಿನಲ್ಲಿ ಭಾನು ವಾರ ಸೇರಿದಂತೆ ಸರ್ಕಾರಿ ರಜಾದಿನಗಳಲ್ಲಿ ಸಂದರ್ಶಕರ ಭೇಟಿಗೆ ಅವಕಾಶವಿಲ್ಲ. ಇದೇ ನಿಯಮ ದರ್ಶನ್ ಅವರಿಗೂ ಅನ್ವಯವಾಗಿದೆ.