ಬೆಂಗಳೂರು : ಮಾದಕ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಮ್ಯಾಪ್-ಡ್ರಗ್ಸ್ ಆ್ಯಪ್ ಬಳಕೆ ಕುರಿತು ತರಬೇತಿ ನೀಡಿ, ಪ್ರತಿ ಜಿಲ್ಲೆಗಳಿಗೂ ಮಾದಕ ವಸ್ತುಗಳ ನಿಯಂತ್ರಣಕ್ಕೆ ಗುರಿ ನಿಗದಿಪಡಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೂಚಿಸಿದರು.
ಇತ್ತೀಚಿಗೆ ವಿಧಾನಸೌಧದ ಸಭಾಂಗಣದಲ್ಲಿ ನಡೆದ 6ನೇ ರಾಜ್ಯ ಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಅನುಸರಿಸುತ್ತಿರುವ ಕ್ರಮವನ್ನು ಮಾದರಿಯಾಗಿಸಿಕೊಂಡು ಇತರೆ ಜಿಲ್ಲೆಗಳು ಅನುಸರಿಸಲು ಸೂಚನೆ ನೀಡಿದರು. ಡ್ರಗ್ಸ್ ತಡೆಗೆ ಸಂಬಂಧಿಸಿದ ಮಾಹಿತಿ ಕನ್ನಡದಲ್ಲಿಯೂ ಲಭ್ಯವಾಗುವಂತೆ ವೆಬ್‌ಸೈಟ್ ನವೀಕರಿಸಬೇಕು. ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ತಡೆಯಲು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು ಕಸ್ಟಮ್ ಅಧಿಕಾರಿಗಳನ್ನು ಸಮಿತಿಗೆ ಆಹ್ವಾನಿಸಲು ನಿರ್ದೇಶನ ನೀಡಿದರು.
ನೋಂದಾಯಿತವಲ್ಲದ ಔಷಧ ಕಂಪನಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಎಲ್ಲ ಔಷಧ ಅಂಗಡಿಗಳ ಮುಂದೆ ವೈದ್ಯರ ಅನುಮತಿಯಿಲ್ಲದೆ ಔಷಧಿ ಮಾರಾಟ ನಿಷೇಧ ಎಂಬ ಫಲಕ ಕಡ್ಡಾಯವಾಗಿ ಅಳವಡಿಸಲು ಕ್ರಮ ಜರುಗಿಸಬೇಕು. ವ್ಯಸನ ಮುಕ್ತ ಕೇಂದ್ರಗಳ ನಿರ್ವ ಹಣೆಗೆ ಸುಧಾರಿತ ಕಾರ್ಯಾಚರಣೆ ವಿಧಾನಗಳನ್ನು (ಎಸ್ ಒಪಿ) ರೂಪಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಒಂದು ಕೇಂದ್ರಕ್ಕೆ ಭೇಟಿ ನೀಡಿ, ವರದಿ ಸಲ್ಲಿಸಲು ಸೂಚಿಸಿದರು. ಹಾಸ್ಟೇಲ್‌ಗಳಲ್ಲಿ ಡ್ರಗ್ ಟೆಸ್ಟಿಂಗ್ ಕಿಟ್ ಬಳಸಿ ವಿದ್ಯಾರ್ಥಿ ಗಳನ್ನು ಪರೀಕ್ಷಿಸಿ ರಕ್ಷಿಸಬೇಕು. ಪಾಸಿಟಿವ್ ಪ್ರಕರಣಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

