Home » ಧರ್ಮಸ್ಥಳ ಗ್ರಾಮ : 11,12ನೇ ಸ್ಥಳದಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ
 

ಧರ್ಮಸ್ಥಳ ಗ್ರಾಮ : 11,12ನೇ ಸ್ಥಳದಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ

ಇಂದು 13ನೇ ಸ್ಥಳದಲ್ಲಿ ಉತ್ಪನನ

by Kundapur Xpress
Spread the love

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಾಮಿಕ ಸಾಕ್ಷಿ ದೂರುದಾರ ಗುರುತಿಸಿರುವ 11 ಮತ್ತು 12ನೇ ಗುರುತು ಸ್ಥಳದಲ್ಲಿ ಮಂಗಳವಾರ ಅಗೆತ ನಡೆಸಲಾಯಿತಾದರೂ, ಯಾವುದೇ ಅವಶೇಷಗಳು ಪತ್ತೆಯಾಗಲಿಲ್ಲ.

ಉತ್ಪನನ ಕಾರ್ಯಾಚರಣೆಯ 7ನೇ ದಿನವಾದ ಮಂಗಳವಾರ 11ನೇ ಸ್ಥಳದಲ್ಲಿ ಬೆಳಗ್ಗೆ 11.30ರಿಂದ ಮಧ್ಯಾಹ್ನ 1.55ರವರೆಗೆ ಅಗೆತ ನಡೆಸಲಾಯಿತು. ದೂರುದಾರನ ಜೊತೆ ಎಸ್‌ಐಟಿ ಅಧಿಕಾರಿಗಳು ಹಾಗೂ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪೌರ ಕಾರ್ಮಿಕರನ್ನು ಬಳಸಿಕೊಂಡು ಸುಮಾರು 6 ಅಡಿಯಷ್ಟು ಗುಂಡಿ ಅಗೆದರೂ ಯಾವುದೇ ಅವಶೇಷ ಸಿಗಲಿಲ್ಲ. ಬಳಿಕ, ಈ ಗುಂಡಿ ಮುಚ್ಚಲಾಯಿತು.

ಭೋಜನ ವಿರಾಮದ ಬಳಿಕ, 3.15ರಿಂದ ನೇತ್ರಾವತಿ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ಕೆಲವೇ ಅಡಿ ದೂರದಲ್ಲಿ ದೂರುದಾರ ಗುರುತಿಸಿರುವ 12ನೇ ಸ್ಥಳದಲ್ಲಿ ಹಿಟಾಚಿ ಬಳಸಿ ಉತ್ಪನನ ನಡೆಸಲಾಯಿತು. ಸಂಜೆ 4:45 ರ ಸುಮಾರಿಗೆ ಕಾರ್ಯಾಚರಣೆ ಅಂತ್ಯಗೊಂಡಿತು. ಸುಮಾರು 6. ಅಡಿಗಳಷ್ಟು ಗುಂಡಿ ಅಗೆದರೂ, ಯಾವುದೇ ಕುರುಹು ಪತ್ತೆಯಾಗಲಿಲ್ಲ. ನಂತರ ಈ ಗುಂಡಿಯನ್ನೂ ಮುಚ್ಚಲಾಯಿತು.

ಈ ಎರಡೂ ಸ್ಥಳಗಳು ರಸ್ತೆಗೆ ತೀರಾ ಸಮೀಪವಿದ್ದ ಹಿನ್ನೆಲೆಯಲ್ಲಿ ಶೆಡ್ ನೆಟ್ ಕಟ್ಟಿ, ಪೊಲೀಸ್ ಬಂದೋಬಸ್ತಿನಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಉತ್ಪನನ ಕಾರ್ಯ 8ನೇ ದಿನವಾದ ಬುಧವಾರ, 13ನೇ ಸ್ಥಳದಲ್ಲಿ ಉತ್ಪನನ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

 

Related Articles

error: Content is protected !!