ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಶಾಸಕರು, ಮುಖಂಡರು ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮನವಿ ನೀಡಿದರು. ಈ ವೇಳೆ ಹತ್ಯೆಗೊಳಗಾದ ಸುಹಾಸ್ ಶೆಟ್ಟಿಯ ಪಾಲಕರೂ ಆಗಮಿಸಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸುಹಾಸ್ ಹತ್ಯೆ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಯ ನಮ್ಮ ನಿರೀಕ್ಷೆ ಹುಸಿಯಾಗಿದೆ. ಆದ್ದರಿಂದ ನಮ್ಮೆಲ್ಲ ಜನಪ್ರತಿನಿಧಿಗಳು, ಸುಹಾಸ್ ಮನೆಯವರು, ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಪ್ರಕರಣದಲ್ಲಿ ವಿದೇಶಿ ಹಣದ ಹರಿವಿನ ಚರ್ಚೆ ನಡೆಯುತ್ತಿದೆ. ಪಿಎಫ್‌ಐ ನಂಟು ಕೂಡ ಕಾಣುತ್ತಿದೆ ಎಂದರು.ಈ ಸಂದರ್ಭದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಕ್ಯಾ.ಬೃಜೇಶ್ ಚೌಟ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಉಭಯ ಜಿಲ್ಲೆಗಳ ಶಾಸಕರು ಉಪಸ್ಥಿತರಿದ್ದರು

