ವಯನಾಡು : ಕೇರಳದ ವಯನಾಡಿನಲ್ಲಿ ಘನಘೋರ ದುರಂತ ಸಂಭವಿಸಿ, 5 ದಿನಗಳೇ ಕಳೆದಿದ್ದು, ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಮುಂದುವರಿದಿದೆ. ಇದರ ನಡುವೆ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 361ಕ್ಕೆ ಏರಿದ್ದು, ಸುಮಾರು 250 ಮಂದಿ ಈವರೆಗೂ ಪತ್ತೆ ಆಗಿಲ್ಲ.
ದುರಂತದ ಸ್ಥಳದಲ್ಲಿ 1000 ರಕ್ಷಣಾ ಪಡೆ ಸಿಬ್ಬಂದಿಗಳು ಹಗಲಿರುಳು ಶ್ರಮ ವಹಿಸುತ್ತಿದ್ದು ನಾಪತ್ತೆ ಆದವರ ಪತ್ತೆಗೆ ವಿಶೇಷ ಶ್ವಾನದಳಗಳು ಕೂಡ ಕೈಜೋಡಿಸಿವೆ. ಇಲ್ಲಿಯವರೆಗೆ ಸುಮಾರು 349 ಜನರನ್ನು ರಕ್ಷಿಸಲಾಗಿದೆ.
ರಕ್ಷಣಾ ಕಾರ್ಯದ ವೇಳೆ ಅವಶೇಷಗಳಡಿ. ಸಿಗುತ್ತಿರುವ ಅರ್ಧಂಬರ್ಧ ಮೃತದೇಹಗಳ ಗುರುತು ಪತ್ತೆ ಸವಾಲಾಗಿದ್ದು, ಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ. ಇದುವರೆಗೆ 148 ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ. ಉಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ ದುರಂತದಲ್ಲಿ ಕೆಲವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.