ಬೆಂಗಳೂರು : ತಮ್ಮ ವಿರುದ್ಧದ ಲೈಂಗಿಕ ಹಗರಣ ಹೊರ ಬಂದ ಬಳಕೆ ಒಂದು ತಿಂಗಳಿಂದ ವಿದೇಶದಲ್ಲಿ ಅಜ್ಞಾತವಾಗಿದ್ದ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೋಮವಾರ ದಿಢೀರ್ ಕಾಣಿಸಿಕೊಂಡಿದ್ದು, ಸ್ವದೇಶಕ್ಕೆ ಇದೇ ತಿಂಗಳ 31ರಂದು ಶುಕ್ರವಾರ ಮರಳಿ ಬಂದು ವಿಶೇಷ ತನಿಖಾ ದಳದ (ಎಸ್ಐಟಿ) ಮುಂದೆ ಸ್ವಯಂ ಶರಣಾಗುವುದಾಗಿ ವಿಡಿಯೋ ಹೇಳಿಕೆ ಬಿಡು ಗಡೆ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಸ್ಐಟಿ ಕೋರಿಕೆ ಮೇರೆಗೆ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಪ್ರಜ್ವಲ್ ಅವರಿಗೆ ವಿದೇಶಾಂಗ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಎಸ್ಐಟಿ ಮುಂದೆ ಹಾಜರಾಗದಿದ್ದರೆ ಕುಟುಂಬದಿಂದ ಹೊರ ಹಾಕುವುದಾಗಿ ಅವರ ತಾತ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡರು ಖಡಕ್ ಬಹಿರಂಗ ಪತ್ರ ಬರೆದಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಎಸ್ಐಟಿ ಮುಂದೆ ಸ್ವಯಂ ಹಾಜರಾಗುವುದಾಗಿ ಸೋಮವಾರ ಅಜ್ಞಾತ ಸ್ಥಳದಿಂದ ಬಿಡುಗಡೆಗೊಂಡ 2.57 ನಿಮಿಷದ ವಿಡಿಯೋದಲ್ಲಿ ಪ್ರಜ್ವಲ್ ತಿಳಿಸಿದ್ದಾರೆ. ತಮ್ಮ ಮೇಲೆ ಕೇಳಿ ಬಂದಿರುವ ಅತ್ಯಾಚಾರ ಆರೋಪಗಳನ್ನು ನಿರಾಕರಿಸಿರುವ ಪ್ರಜ್ವಲ್, ತಮ್ಮ ರಾಜಕೀಯ ಬೆಳವಣಿಗೆ ಸಹಿಸದೆ ಕೆಲವು ವಿರೋಧಿಗಳು ರಾಜಕೀಯ ಪಿತೂರಿ ನಡೆಸಿದ್ದಾರೆ ಎಂದಿದ್ದಾರೆ