ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳ ಕ್ಷೇತ್ರದ ಗೌರವ ಹಾಗೂ ಘನತೆಯನ್ನು ಕುಗ್ಗಿಸುವ ಯತ್ನಗಳು ನಡೆಯುತ್ತಿರುವುದನ್ನು ಸಹಿಸಲಾಗದು. ಯಾವುದೋ ವಿಚಾರಕ್ಕೆ ಪುಣ್ಯ ಕ್ಷೇತ್ರವನ್ನು ಬೊಟ್ಟು ಮಾಡುವುದು ಅಕ್ಷಮ್ಯ ಅಪರಾಧ ಎಂದು ವಿಶ್ವಹಿಂದೂ ಪರಿಷತ್ ಹೇಳಿದೆ.
ಧರ್ಮಕ್ಕೆ ಪ್ರತಿರೂಪವಾಗಿರುವ ಧರ್ಮಸ್ಥಳಕ್ಕೆ ಇಂದು ಪಟ್ಟಬದ್ಧ ಹಿತಾಸಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ವ್ಯಾಪಕವಾಗಿ ಅಪಪ್ರಚಾರವೆಸಗುತ್ತಾ ಕ್ಷೇತ್ರದ ಗೌರವ ಹಾಗೂ ಘನತೆಯನ್ನು ಕುಗ್ಗಿಸಲೆತ್ನಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ.
ಧರ್ಮಸ್ಥಳ ಮಾತ್ರವಲ್ಲದೆ ರಾಜ್ಯ ಹಾಗೂ ದೇಶದ ಇನ್ನೂ ಆನೇಕ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ಪಿತೂರಿ ಮಾಡುವ ಎಲ್ಲ ಅಹಿಂದು- ಆರಾಷ್ಟ್ರೀಯ ಶಕ್ತಿಗಳ ವಿರುದ್ಧ ವಿಶ್ವ ಹಿಂದು ಪರಿಷತ್ ಎಲ್ಲ ರೀತಿಯ ಹೋರಾಟ ಮಾಡಲು ಸಿದ್ಧವಿದೆ. ಅಲ್ಲದೆ ಧರ್ಮಸ್ಥಳ ವಿರುದ್ಧದ ವೃಥಾ ಆರೋಪಗಳ ಬಗ್ಗೆ ಸಮಗ್ರ ತನಿಖೆಯನ್ನು ಸರ್ಕಾರ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಅಧ್ಯಕ್ಷ ದೀಪಕ್ ರಾಜ್ ಗೋಪಾಲ್ ಹಾಗೂ ನಿಕಟಪೂರ್ವ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ ಪುರಾಣಿಕ್ ಜಂಟಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

