ಖ್ಯಾತ ಚಿಂತಕ ಸಾಮ್ಯುಯಲ್ ಬಟ್ಲರ್ ಒಂದೆಡೆ ಹೇಳುತ್ತಾರೆ: ಬದುಕಿನಲ್ಲಿ ನಮಗೆ ಬೇಕಾದದ್ದು ಬಹಳವೇನೂ ಅಲ್ಲ; ಆದರೂ ಆ ಅಲ್ಪವನ್ನೇ ಪಡೆಯಲು ನಾವು ಬಹುಕಾಲ ಹೋರಾಡುತ್ತೇವೆ! ನಮ್ಮ ಆಂತರ್ಯವನ್ನು ನಾವು ಪ್ರಶ್ನಿಸಿಕೊಳ್ಳುವುದಿದೆ: ನಾನೇಕೆ ಇಷ್ಟು ಸ್ವಾರ್ಥಿ? ನನ್ನಲ್ಲಿ ಯಾಕಿಷ್ಟು ವ್ಯಾಮೋಹ? ನಿಜಕ್ಕೂ ನನಗೆ ತೃಪ್ತಿಯಿಂದ ಬಾಳಲು ಬೇಕಾದದ್ದು ಏನು? ನನಗೆ ಬೇಕಾದ ಸಂಪತ್ತು ಎಷ್ಟು? ಈ ಪ್ರಶ್ನೆಗಳೇನೋ ತುಂಬ ಸರಳ. ಆದರೆ ಅವುಗಳಿಗೆ ಉತ್ತರ ಪಡೆಯುವುದು ಮಾತ್ರ ತುಂಬ ಕಷ್ಟ. ಇಂತಹ ಪ್ರಶ್ನೆಗಳು ನಮ್ಮ ಆಂತರ್ಯದಲ್ಲಿ ಮೂಡುತ್ತವೆ ಎಂದಾಗಲಿ ಅವುಗಳಿಗೆ ಉತ್ತರ ಸಿಗದೆ ನಾವು ಚಡಪಡಿಸುತ್ತೇವೆ ಎಂದಾಗಲಿ ನಾವು ಯಾರಲ್ಲೂ ಹೇಳಿಕೊಳ್ಳುವುದಿಲ್ಲ ಮಾತ್ರವಲ್ಲ ಹೇಳಲು ಕೂಡ ಸಾಧ್ಯವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣವೇ ನಮ್ಮ ದ್ವಂದ್ವ ವ್ಯಕ್ತಿತ್ವ. ದಾರ್ಶನಿಕರು ಮನುಷ್ಯನಿಗೆ ಮೂರು ಮುಖಗಳಿವೆ ಎನ್ನುತ್ತಾರೆ: ಮೊದಲನೆಯದು ಇತರರಿಗೆ ಕಾಣಿಸುವ ತನ್ನ ಮುಖ; ಎರಡನೆಯದು ತನ್ನದೆಂದು ತಾನು ಭಾವಿಸುವ ಮುಖ; ಮೂರನೆಯದು ತನಗರಿವಲ್ಲದ ತನ್ನ ನಿಜವಾದ ಮುಖ. ಈ ಮೂರನೇ ಮುಖವನ್ನು ನಾವು ಬದುಕಿನುದ್ದಕ್ಕೂ ಕಾಣಲಾರೆವು. ಕಾಣಲೇಬೇಕೆಂಬ ಛಲವಿದ್ದರೆ ದೇಹ, ಮನುಸ್ಸು ಹಾಗೂ ಬುದ್ದಿಯ ಆವರಣಗಳನ್ನು ದಾಟಿ ಆತ್ಮನೊಡನೆ ಸಂವಹನ-ಸಂಪರ್ಕವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಅದಕ್ಕೆ ಬೇಕಾದದ್ದು ಆತ್ಮಪ್ರಜ್ಞೆ ಮತ್ತು ಆತ್ಮಜ್ಞಾನ, ನಾನು ಯಾರು, ಎಲ್ಲಿಂದ ಬಂದೆ, ಇಲ್ಲಿಗೆ ಬರುವ ಮೊದಲು ಎಲ್ಲಿದ್ದೆ. ಇಲ್ಲಿಂದ ನಿರ್ಗಮಿಸಿದ ಬಳಿಕ (ಸಾವಿನ ಬಳಿಕ) ಎಲ್ಲಿಗೆ ಹೋಗುವೆ ಎಂಬಿತ್ಯಾದಿ ಪ್ರಶ್ನೆಗಳ ಚಿಂತನೆಯಲ್ಲೇ ಕೈವಲ್ಯ ಜ್ಞಾನ ಅಡಗಿದೆ. ಅದನ್ನು ಅರಿತುಕೊಳ್ಳಲು ಸಾಧ್ಯವಾದರೆ ಬದುಕಿನಲ್ಲಿ ಮತ್ತೆ ನಮಗೆ ಯಾವ ಗೊಂದಲವೂ ಉಂಟಾಗದು. ಯಾರ ಹುಟ್ಟು ಮತ್ತು ಸಾವು ಕೂಡ ನಮ್ಮನ್ನು ತಲ್ಲಣಗೊಳಿಸದು!