ಬಾಹ್ಯ ಜಗತ್ತಿನೊಂದಿಗೆ ನಮ್ಮನ್ನು ನಾವು ಬೆಸೆದುಕೊಂಡಿರುವ ತೀವ್ರತೆಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ನಾವು ಸ್ವಾರ್ಥಪರರಾಗಿ ವರ್ತಿಸುವ ರೀತಿಯನ್ನು ಕಂಡಾಗ ಮಕ್ಕಳ ಆಟಕ್ಕಿಂತಲೂ ಅದು ಕಡೆಯಾಗಿ ಕಾಣುತ್ತದೆ. ಲೌಕಿಕ ಬದುಕಿನಲ್ಲಿ ನಮಗೆ ದೇವರ ಅಗತ್ಯ ಕಾಣುವುದು ಕೇವಲ ನಮ್ಮ ಕೊರತೆಗಳನ್ನು ಪೂರೈಸಿಕೊಳ್ಳುವುದಕ್ಕೆ ಸೀಮಿತ ಎನ್ನುವುದೂ ಸ್ಪಷ್ಟವಾಗುತ್ತದೆ. ಲೌಕಿಕ ಜಗತ್ತಿನೊಡನೆ ನಮಗಿರುವ ಬಂಧನವು ನಮ್ಮನ್ನು ತೀವ್ರವಾದ ಭ್ರಾಂತಿಗೆ ಗುರಿಪಡಿಸಿದೆ. ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಅಂತರವನ್ನು ತಿಳಿಯಲು ಆ ಭ್ರಾಂತಿ ಅಡ್ಡಬರುತ್ತದೆ. ತಾಮಸ ಮತ್ತು ರಾಜಸ ಗುಣಗಳು ಮೆರೆಯುವಾಗೆಲ್ಲ ನಾವು ಭ್ರಾಂತಿಯ ವಶದಲ್ಲಿರುತ್ತೇವೆ. ಒಮ್ಮೆ ಕೆಲವು ಮೀನುಗಾರ ಮಹಿಳೆಯರು ತಮ್ಮ ದೈನಂದಿನ ಮೀನು ಮಾರಾಟದ ಕಾಯಕವನ್ನು ಮುಗಿಸಿ ಮನೆಗೆ ಮರಳುವಾಗ ರಾತ್ರಿಯಾಯಿತು. ಮನೆ ಸೇರುವ ಸಾಧ್ಯತೆ ಇಲ್ಲವಾಯಿತು. ಕೊನೆಗೆ ಹಾದಿಯ ನಡುವೆ ಹೂ ಮಾರುವವರೊಬ್ಬರ ಮನೆ ಎದುರಾಯಿತು. ಆ ರಾತ್ರಿಯನ್ನು ಅಲ್ಲೇ ಕಳೆಯುವ ಆಲೋಚನೆಯಲ್ಲಿ ಮನೆ ಯಜಮಾನನಿಂದ ಒಪ್ಪಿಗೆಯನ್ನೂ ಪಡೆದರು. ಹೂವಿನ ಘಮಘಮ ಪರಿಮಳ ಆ ಮನೆಯಲ್ಲಿ, ಸುತ್ತಮುತ್ತಲ ವಾತಾವರಣದಲ್ಲಿ ತುಂಬಿಕೊಂಡಿತ್ತು. ಆದರೆ ಮೀನುಗಾರ ಮಹಿಳೆಯರಿಗೆ ಹೂವಿನ ಪರಿಮಳ ಹಿತವೆನಿಸಲಿಲ್ಲ. ಅದು ಅವರ ನಿದ್ದೆಯನ್ನೇ ಕೆಡಿಸಿತ್ತು. ಮೀನಿನ ವಾಸನೆ ಇಲ್ಲದೆ ನಿಶ್ಚಿತವಾಗಿಯೂ ನಿದ್ದೆ ಬಾರದು ಎಂದು ಅನ್ನಿಸಿತು. ಒಡನೆಯ ಅವರು ತಮ್ಮ ಮೀನಿನ ಬುಟ್ಟಿಯನ್ನು ಮುಖದ ಪಕ್ಕಕ್ಕಳೆದುಕೊಂಡು ಮೀನಿನ ವಾಸನೆಯ ಬಲದಲ್ಲಿ ಸುಖವಾಗಿ ನಿದ್ದೆಹೋದರು! ಇದೊಂದು ಕತೆಯೇ ಆದರೂ ನಮ್ಮ ಲೌಕಿಕ ಭ್ರಾಂತಿಗಳಿಗೆ ಇದೊಂದು ಉತ್ತಮ ಉದಾಹರಣೆ ಎನ್ನಬಹುದು, ಈ ಭ್ರಾಂತಿಗಳಿಂದ ಹೊರ ಬರಲು ಸಾಧ್ಯವಾಗದಿದ್ದರೆ ನಮಗೆ ನಮ್ಮ ಆತ್ಮನ ನಿಜ ರೂಪದ ಪರಿಚಯವಾಗುವುದಾದರೂ ಹೇಗೆ?