Home » ಆತ್ಮ ಜಾಗೃತಿ
 

ಆತ್ಮ ಜಾಗೃತಿ

by Kundapur Xpress
Spread the love

ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ ಬದುಕಿನಲ್ಲಿ ನಮ್ಮ ಲಕ್ಷ್ಯ ಸುಖವಲ್ಲ ಆದರೂ ಸುಖವೇ ಜೀವನದ ಗುರಿ, ಅದರ ಪ್ರಾಪ್ತಿಗಾಗಿ ಶ್ರಮಿಸಬೇಕು ಎಂಬ ಹುಚ್ಚು ತಿಳಿವಳಿಕೆಯೇ ಹಲವರಲ್ಲಿ ಇರುವುದರಿಂದ ಅದು ಈ ಜಗತ್ತಿನಲ್ಲಿ ಎಲ್ಲ ಕ್ಲೇಶಗಳಿಗೆ ಕಾರಣವಾಗಿದೆ’.ಇಂದಿನ ಭೋಗಪ್ರಧಾನ ಪ್ರಪಂಚದಲ್ಲಿ ಸುಖವೇ ಜೀವನದ ಗುರಿ ಎಂದು ಭಾವಿಸುವವರ ಸಂಖ್ಯೆ ಅತ್ಯಧಿಕ ಜಾಗತೀಕರಣದ ಗರ್ಭದಿಂದ ಹೊರಬಂದಿರುವ ಕೊಳ್ಳುಬಾಕ’ ಪಾಶ್ಚಾತ್ಯ ಭೋಗ ಜೀವನ ಕ್ರಮವೇ ಇಂದು ಇಡೀ ವಿಶ್ವವನ್ನು ಆವರಿಸಿಕೊಂಡಿದೆ. ಹಾಗಾಗಿ ಸುಖಭೋಗದಲ್ಲಿ ಇಂದು ಎಲ್ಲೆಡೆ ಸ್ಪರ್ಧೆಯೇ ಏರ್ಪಟ್ಟಿದೆ. ಪ್ರತಿಯೋರ್ವನು ತನಗಿಂತ ಹೆಚ್ಚು ಭೋಗಿಯಾಗಿರುವವರನ್ನು ಕಂಡು ನಿರಂತರವಾಗಿ ದುಃಖಿಸುವ ಮನೋಭಾವವನ್ನು ಬೆಳೆಸಿಕೊಂಡಿದ್ದಾನೆ. ಐಹಿಕ ಬದುಕಿನ ಐಷಾರಾಮೀ ಸಾಧನೆಗಳೇ ನಿಜವಾದ ಸುಖವನ್ನು ನೀಡುತ್ತವೆ ಎಂಬ ಭ್ರಮೆಯನ್ನು ಬೆಳೆಸಿಕೊಂಡಿದ್ದಾನೆ. ಅಂತೆಯೇ ಅವುಗಳನ್ನು ಪಡೆಯಲು ನಿಕೃಷ್ಣ ಸ್ಥಿತಿಗೆ ಇಳಿಯಲೂ ಸಿದ್ಧನಾಗಿದ್ದಾನೆ. ದೇಹಕ್ಕೆ ಸುಖವನ್ನು ಕೊಡುವ ಉಪಕರಣಗಳಿಂದ ನಾವು ಪಡೆಯುವುದು ಕೇವಲ ದೇಹ ಸೌಕರ್ಯವೇ ವಿನಾ ಮನಸ್ಸಿನ ಆನಂದವಲ್ಲ, ಮನಸ್ಸಿನ ಆನಂದಕ್ಕೂ ಹೊರಗಿನ ಜಗತ್ತಿನ ಆಕರ್ಷಣೆಗೂ ಸಂಬಂಧವೇ ಇಲ್ಲ. ನಿಜ ನೋಡಹೋದರೆ ಯಾವುದೇ ಆಕರ್ಷಣೆ ವಿಕರ್ಷಣೆಗೆ ಬಲಿಯಾಗದೆ ಸದಾ ಸಮತೆಯಲ್ಲಿ ನೆಲೆಗೊಳ್ಳುವ ಮನಕ್ಕೆ ದೊರಕುವ ಆನಂದವೇ ನಿಜವಾದ ಆನಂದ. ಅಲ್ಲಿ ಯಾವುದೇ ಬಗೆಯ ಅಪೇಕ್ಷೆಗಳಿಗೆ ಆಸ್ಪದವಿಲ್ಲ. ದ್ವೇಷ-ಅಸೂಯೆಗಳಿಗೆ ಜಾಗವಿಲ್ಲ. ದೇವರ ಸಾನ್ನಿಧ್ಯವಲ್ಲದೆ ಬೇರೇನೂ ಬೇಡವೆಂಬ ಸ್ಥಿರತೆಯೇ ಆ ಸಮತೆಯಲ್ಲಿ ವ್ಯಕ್ತವಾಗುತ್ತಿರುತ್ತದೆ. ಅನಿತ್ಯವಾದ ವಸ್ತುಗಳ ಇತಿಮಿತಿಯನ್ನು ಅರಿಯುವ ಮೂಲಕ ಅವುಗಳಿಂದ ದೊರಕುವ ಸುಖವು ಕೇವಲ ಮಿಥೈಯಲ್ಲದೆ ಬೇರೇನೂ ಅಲ್ಲ ಎಂಬ ಸತ್ಯವನ್ನು ಅರಿಯುವಲ್ಲಿ ಆತ್ಮಜಾಗೃತಿ ಇದೆ

   

Related Articles

error: Content is protected !!