**ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರುಮೇ ದೇವ
ಸರ್ವಕಾರ್ಯೇಷು ಸರ್ವದಾll
ಭಾರತವು ಹಬ್ಬಗಳ ದೇಶವಾಗಿದೆ ಮತ್ತು ಗಣೇಶ ಚತುರ್ಥಿಯು ಅಂತಹ ಹಬ್ಬಗಳಲ್ಲಿ ಒಂದು. ಗಣೇಶೋತ್ಸವವನ್ನು ಹತ್ತು ದಿನಗಳ ಕಾಲ ತುಂಬಾ ಉತ್ಸವಮಯವಾಗಿ ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯ ಇತಿಹಾಸ 17ನೇ ಶತಮಾನದಿಂದ ಪ್ರಾರಂಭವಾಗುತ್ತದೆ. ಈ ಹಬ್ಬವನ್ನು ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರು ಪ್ರಾರಂಭಿಸಿದರು ಎಂದು ನಂಬಲಾಗಿದೆ. ಶಿವಾಜಿ ಈ ಹಬ್ಬವನ್ನು ತಮ್ಮ ಜನರನ್ನು ಒಗ್ಗೂಡಿಸಲು ಮತ್ತು ಹಿಂದೂ ಸಂಸ್ಕೃತಿಯನ್ನು ಉತ್ತೇಜಿಸಲು ಬಳಸಿದರು
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಣೇಶೋತ್ಸವವು ಮಹತ್ವದ ಪಾತ್ರವನ್ನು ವಹಿಸಿದೆ. 1894ರಲ್ಲಿ ಬ್ರಿಟಿಷರು ಭಾರತೀಯರ ಮೇಲೆ ಹೇರಿದ ಸೆಕ್ಷನ್ 144 ಎಂಬ ಕಾನೂನು, ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ನಿರ್ಬಂಧ ಹಾಕಿತ್ತು. ಈ ಕಾನೂನಿನ ಅಡಿ, ಐದು ಮಂದಿ ಅಥವಾ ಹೆಚ್ಚು ಜನರು ಒಂದೆಡೆ ಸೇರಲು ಅನುಮತಿ ನೀಡಲಾಗುತ್ತಿರಲಿಲ್ಲ.ಇದರಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಮಸ್ಯೆಯಾಗಿತ್ತು.
ಮಹಾನ್ ಕ್ರಾಂತಿಕಾರಿ ಬಂಕಿಮ್ ಚಂದ್ರ ಚಟರ್ಜಿ 1882ರಲ್ಲಿ ‘ವಂದೇ ಮಾತರಂ’ ಹಾಡು ಬರೆದರು, ಅದಕ್ಕೂ ಬ್ರಿಟಿಷರು ನಿರ್ಬಂಧವಿಟ್ಟು, ಹಾಡಿದವರನ್ನು ಬಂಧಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ, ಬ್ರಿಟಿಷರ ವಿರುದ್ಧದ ಕೋಪ ಹೆಚ್ಚಾಯಿತು. ಬ್ರಿಟಿಷರ ವಿರುದ್ಧ ಜನರಲ್ಲಿ ಧೈರ್ಯ ತುಂಬಲು, 1894ರಲ್ಲಿ ಲೋಕಮಾನ್ಯ ತಿಲಕರಿಂದ ಗಣಪತಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲಾಯಿತು.ಪ್ರಥಮ ಪೂಜಿತನಾದ ಗಣೇಶನು ಜೀವನದ ಕಷ್ಟಗಳನ್ನು ನಿವಾರಿಸುತ್ತಾನೆ, ಭಕ್ತಿಯಿಂದ ಪೂಜಿಸಿದರೆ ಬೇಡಿದ ವರವನ್ನು ಇಲ್ಲವೆನ್ನದೆ ನೀಡುವವನು ಎಂಬ ನಂಬಿಕೆ ಇದೆ. ಶಾಂತಿ ಹಾಗೂ ಸೌಹಾರ್ದತೆಯನ್ನು ಬಿಂಬಿಸುವವನೂ ಗಣೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಷ್ಟು ಮಾತ್ರವಲ್ಲದೇ ವಿನಾಯಕನ ದೇಹದ ಪ್ರತಿಯೊಂದು ಅವಯವಗಳಿಗೂ ಕೂಡಾ ತನ್ನದೇ ಆದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ
ಗಣೇಶನ ದೊಡ್ಡ ತಲೆಯ ಸಂಕೇತ ‘ ದೊಡ್ಡದಾಗಿ ಯೋಚಿಸಿ’ ಎಂದರ್ಥ. ಹೇಗೆಂದರೆ ಗಣೇಶನನ್ನು ಬುದ್ಧಿವಂತಿಕೆಯ ದೇವರಾಗಿ ಪೂಜಿಸಲಾಗುತ್ತದೆ. ವಿನಾಯಕನ ಆನೆಯ ತಲೆಯು ಬುದ್ಧಿವಂತಿಕೆ ಹಾಗೂ ವಿಶೇಷ ಮೆದುಳಿನ ಶಕ್ತಿಯನ್ನು ಸೂಚಿಸುತ್ತದೆ.
ಗಣಪತಿಯ ಪುಟ್ಟ ಕಣ್ಣುಗಳು ಏಕಾಗ್ರತೆಯ ಸಂಕೇತವಾಗಿದೆ. ಈ ಕಣ್ಣುಗಳು ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಕಲಿಸುತ್ತವೆ. ಹೇಗೆಂದರೆ ಒಬ್ಬ ವ್ಯಕ್ತಿಯು ಏಕಾಗ್ರತೆಯ ಮೂಲಕ ತನ್ನ ಮನಸ್ಸನ್ನು ನಿಯಂತ್ರಿಸಿದರೆ ಜೀವನದಲ್ಲಿ ಯಾವುದೇ ಯಶಸ್ಸನ್ನು ಸಾಧಿಸಬಹುದು.
ಗಣೇಶನ ಪುಟ್ಟ ಬಾಯಿಯು ‘ ಕಡಿಮೆ ಮಾತನಾಡಿ’ ಎನ್ನುವುದರ ಸಂಕೇತ. ಇದು ನಮಗೆ ಹೆಚ್ಚು ಮಾತನಾಡುವ ಬದಲು ಕೆಲಸವನ್ನು ಮಾಡು ಎನ್ನುವುದನ್ನು ಕಲಿಸುತ್ತದೆ. ಹಾಗಾಗಿ ನಮ್ಮ ಮಾತಿಗಿರುವ ಮೌಲ್ಯವನ್ನು ಮೊದಲು ಅರಿತುಕೊಂಡು, ಆಲಿಸಿ ನಂತರ ಯೋಚಿಸಿ, ನಂತರ ಕಾರ್ಯವನ್ನು ಮಾಡಿದ ಮೇಲೆ ಮಾತನಾಡಬೇಕು ಎನ್ನುವುದನ್ನು ತಿಳಿಸುತ್ತದೆ.
ಜೀವನದಲ್ಲಿ ಒಳ್ಳೆಯದು ಹಾಗೂ ಕೆಟ್ಟದನ್ನು ಜೀರ್ಣಿಸಿಕೊಳ್ಳಿ ಎನ್ನುವ ಪಾಠವನ್ನು ಗಣೇಶನ ಹೊಟ್ಟೆಯು ಹೇಳುತ್ತದೆ. ಶಾಂತತೆಯ ಸದ್ಗುಣವನ್ನು ಸಾಧಿಸಿ ಎನ್ನುವುದನ್ನೂ ಸೂಚಿಸುತ್ತದೆ. ಗಣೇಶನ ಹೊಟ್ಟೆಯು ಅನಂತ ವಿಶ್ವಗಳನ್ನು ಒಳಗೊಂಡಿದೆ. ಇದು ಗಣೇಶನಿಗಿರುವ ಬ್ರಹ್ಮಾಂಡದ ದುಃಖಗಳನ್ನು ನುಂಗುವ ಹಾಗೂ ಜಗತ್ತನ್ನು ರಕ್ಷಿಸುವ ಸಾಮರ್ಥ್ಯವನ್ನು ಸಾಂಕೇತಿಸುತ್ತದೆ
ವಿನಾಯಕನ ನಾಲ್ಕು ತೋಳುಗಳೂ ದೇಹದ ಸೂಕ್ಷ್ಮ ಆಂತರಿಕ ಗುಣಲಕ್ಷಣಗಳನ್ನು ಪ್ರನಿಧಿಸುತ್ತದೆ. ಅವುಗಳೆಂದರೆ ಮನಸ್ಸು, ಬುದ್ದಿಶಕ್ತಿ, ಅಹಂ ಹಾಗೂ ಚಿತ್ತ (ಆತ್ಮಸಾಕ್ಷಿ.)
ಮೊದಲ ತೋಳು: ಇದು ಬಂಧಗಳು ಹಾಗೂ ಮಮತೆಯನ್ನು ಬೇರ್ಪಡಿಸುವುದರ ಸೂಚಕವಾಗಿದೆ. ಕೊಡಲಿಯನ್ನು ಬೀಸುವ ಕೈಯು ಎಲ್ಲಾ ಆಸೆಗಳನ್ನು ಬೇರ್ಪಡಿಸುವ, ನೋವು, ಸಂಕಟಗಳನ್ನು ದೂರ ಮಾಡುವುದರ ಸಂಜೇತ. ಈ ಕೊಡಲಿಯಿಂದ ಗಣೇಶನು ಅಡೆತಡೆಗಳನ್ನು ನಿವಾರಿಸುತ್ತಾನೆ ಹಾಗೂ ಹಿಮ್ಮೆಟ್ಟಿಸುತ್ತಾನೆ
ಮೂರನೇ ತೋಳು: ಗಣೇಶನ ಮೂರನೇ ಕೈಯು ಆಶೀರ್ವಾದದ ಭಂಗಿಯಲ್ಲಿದೆ. ಇದು ಆಧ್ಯಾತ್ಮಿಕ ಅನ್ವೇಷಕರಿಗೆ ರಕ್ಷಣೆ ಮತ್ತು ಮಾರ್ಗದರ್ಶನ ನೀಡುತ್ತದೆ.
ನಾಲ್ಕನೇ ತೋಳು: ಮೋದಕವನ್ನು ಹಿಡಿದಿರುವ ನಾಲ್ಕನೇ ಹಸ್ತವು ಅರಿತುಕೊಂಡ ಆಂತರಿಕ ಆತ್ಮದ ಮಾಧುರ್ಯವನ್ನು ಸೂಚಿಸುತ್ತದೆ ಹಾಗೂ ಭಕ್ತಿಯ ಪ್ರತಿಫಲವನ್ನು ಪ್ರತಿನಿಧಿಸುತ್ತದೆ
ಗಣೇಶ ಚತುರ್ಥಿಯ ಆಧ್ಯಾತ್ಮಿಕ ಮಹತ್ವ
ನಾವೆಲ್ಲರೂ “ಶ್ರೀ ಗಣೇಶನ” ಆಗಮನ ಮತ್ತು ಜನ್ಮವನ್ನು ಬಹಳ ನಂಬಿಕೆ ಮತ್ತು ಉತ್ಸಾಹದಿಂದ ಆಚರಿಸುತ್ತೇವೆ ಮತ್ತು ನಮ್ಮ ಜೀವನದಲ್ಲಿನ ಅಡೆತಡೆಗಳನ್ನು ನಾಶಮಾಡಲು ಆತನನ್ನು ಪ್ರಾರ್ಥಿಸುತ್ತೇವೆ. ಅವನ ಜನ್ಮ ಮತ್ತು ದೈಹಿಕ ರೂಪದ ಪೌರಾಣಿಕ ಕಥೆಯು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ. ಇತರ ಹಬ್ಬಗಳಂತೆ, ಶ್ರೀ ಗಣೇಶ ಚತುರ್ಥಿ ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.
ಶ್ರೀ ಗಣೇಶನು ನಮ್ಮಲ್ಲಿ ಪ್ರತಿಯೊಬ್ಬರೊಳಗೆ ಇರುವ ನಿಜವಾದ ದೈವತ್ವವನ್ನು ಪ್ರತಿನಿಧಿಸುತ್ತಾನೆ. ಅವನ ರೂಪ ಅನೇಕ ಸದ್ಗುಣಗಳನ್ನು ಸಂಕೇತಿಸುತ್ತದೆ ಮತ್ತು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮತ್ತು ಅನುಸರಿಸಲು ಮಾರ್ಗದರ್ಶಿ ತತ್ವವಾಗಿದೆ
ಹಿಂದೆ ಅತ್ಯಂತ ಭಯಭಕ್ತಿಯಿಂದ ಗಣೇಶೋತ್ಸವ ಆಚರಣೆ ನಡೆಯುತ್ತಿತ್ತು.ಆದರೆ ಇದೀಗ ಗಣೇಶೋತ್ಸವ ಆಚರಣೆಯಲ್ಲಿ ಭಕ್ತಿಯ ಲವಲೇಶವೂ ಇಲ್ಲದಂತಾಗಿದೆ.ಈಗ ಗಣೇಶೋತ್ಸವ ಕೇವಲ ಫ್ಯಾಷನ್ ಆಗುವ ಹಂತಕ್ಕೆ ತಲುಪಿದೆ. ಮಕ್ಕಳು ಯುವಕ ಯುವತಿಯರಿಗೆ ರಂಗುರಂಗಿನ ಬಟ್ಟೆ ತೊಟ್ಟು ಫಿಲ್ಮ್ ಡ್ಯಾನ್ಸ್, ಕೀಳು ಅಭಿರುಚಿಯ ನಾಟಕಗಳನ್ನು ಪ್ರದರ್ಶಿಸುವ ಹುಮ್ಮಸ್ಸು….. ಅದಕ್ಕೂ ಮಿಗಿಲಾಗಿ ಜನರಿಗೆ ಇಂತಹ ಮನೋರಂಜನೆ ಕೊಡುವ ಡ್ಯಾನ್ಸ್, ನಾಟಕಗಳೇ ಬೇಕು…..ಗಣೇಶೋತ್ಸವ ಕಾರ್ಯಕ್ರಮದ 4/5 ದಿನಗಳಲ್ಲಿ ಕೇವಲ ಭಕ್ತಿಗೀತೆ, ಪೌರಾಣಿಕ,ದೇವರ ಕುರಿತ ಯಕ್ಷಗಾನ, ನೃತ್ಯ ಎಂದರೆ ಬೆರಳೆಣಿಕೆಯಷ್ಟು ಜನ ಮಾತ್ರ ಸೇರುತ್ತಾರೆ….. ಪಾಪ ಆಯೋಜಕರಿಗೆ ಜನ ಸೇರಿಸುವ ತಲೆಬಿಸಿ….ಅದಕ್ಕಾಗಿ ಗಣೇಶ ನ ಹೆಸರಿನಲ್ಲಿ ಒಂದಷ್ಟು ನಾಟಕ, ಯುವಕ,ಯುವತಿಯರನ್ನು ಹುಚ್ಚೆಬ್ಬಿಸುವ ಸಲುವಾಗಿ ಸಾಮಾಜಿಕ ನಾಟಕಗಳು, ಫಿಲ್ಮ್ ಸ್ಟಾರ್ ಗಳ ಆರ್ಕೆಸ್ಟ್ರಾಗಳನ್ನು ಆಯೋಜನೆ ಮಾಡಬೇಕಾದ ಪರಿಸ್ಥಿತಿ….
ಹಿಂದೂಗಳೇ ನಾವು ನಮ್ಮ ಧಾರ್ಮಿಕ ಆಚರಣೆಗಳ ಮೂಲ ಸ್ವರೂಪವನ್ನು ಮೆರೆಯುತ್ತಿದ್ದೇವೆ ಮಕ್ಕಳಿಗೆ ನಮ್ಮ ಧಾರ್ಮಿಕ ಆಚರಣೆಯ ಪರಂಪರೆಯನ್ನು ತಿಳಿಸುವ ಕೆಲಸವನ್ನೇ ಮಾಡುತ್ತಿಲ್ಲ ಹಣವುಳ್ಳವರಿಗೆ ಗಣೇಶೋತ್ಸವ ನಡೆಸುವುದೇ ಒಂದು ಪ್ರತಿಷ್ಠೆಯಾದರೆ ಅಲ್ಲಿ ನಡೆಯುವ ಗೌಜಿ ಗಮ್ಮತ್ತು ನೋಡುವ ಜನರಿಗೂ ಧಾರ್ಮಿಕತೆ ಹೆಸರಿನಲ್ಲಿ ಬಿಟ್ಟಿ ಮನೋರಂಜನೆಯೂ ಸಿಗುತ್ತದೆ
ಧಾರ್ಮಿಕ ಚೌಕಟ್ಟಿನಲ್ಲಿ ಗಣೇಶೋತ್ಸವವನ್ನು ಅತ್ಯಂತ ಭಕ್ತಿ ಪೂರ್ವಕವಾಗಿ ಆಚರಿಸೋಣ ಗಣೇಶೋತ್ಸವದಲ್ಲಿ ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸೋಣ ನಮ್ಮ ಮುಂದಿನ ಪೀಳಿಗೆಗೆ ಗಣೇಶೋತ್ಸವ ಆಚರಣೆಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡೋಣ..
ಸಮಸ್ತ ಭಕ್ತ ಬಾಂಧವರಿಗೂ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು
ಸ್ವರ್ಣ ಕುಂದಾಪುರ