ತಿರುಮಲ : ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡು ಪ್ರಸಾದ ತಯಾರಿಕೆಗೆ ಕಳಪೆ ಗುಣಮಟ್ಟದ ತುಪ್ಪ ಬಳಕೆ ಮಾಡಿದ್ದು ನಿಜ ಎಂದು ದೇಗುಲದ ಉಸ್ತುವಾರಿ ಹೊತ್ತಿರುವ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಖಚಿತಪಡಿಸಿದೆ.
ಗುರುವಾರ ಟಿಡಿಪಿ ನಾಯಕರು, ಗುಜರಾತ್ನ ಪ್ರಯೋಗಾಲಯದ ವರದಿ ಪ್ರಸ್ತಾಪಿಸಿ, ಹಿಂದಿನ ಜಗನ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದರೆ ಇದೀಗ ಈ ವಿಷಯವನ್ನು ಸ್ವತಃ ಟಿಟಿಡಿ ಖಚಿತಪಡಿಸಿದೆ. ಇನ್ನೊಂದೆಡೆ ದೇಗುಲದಲ್ಲಿ ಕಳಪೆ ಗುಣ ಮಟ್ಟದ ಪ್ರಸಾದ ತಯಾರಿ ಬಗ್ಗೆ ಹಿಂದಿನ ಮುಖ್ಯಸ್ಥರು ಮತ್ತು ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದೆ. ಆದರೆ ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಅದರೆ ಬದಲಾಗಿ ನನ್ನ ವಿರುದ್ಧವೇ ಸುಳ್ಳು ಆರೋಪ ಮಾಡಿ ಕೆಲಸದಿಂದ ಕಿತ್ತುಹಾಕಲಾಗಿತ್ತು ಎಂದು ತಿರುಪತಿ ದೇಗುಲದ ಮಾಜಿ ಮುಖ್ಯ ಅರ್ಚಕ ರಮಣ ದೀಕ್ಷಿತುಲು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಕಳಪೆ ಗುಣಮಟ್ಟದ ವಸ್ತು ಬಳಸಿ ಲಡ್ಡು ತಯಾರಿಸಿದ್ದು ನಿಜ ಎಂದು ಹೇಳಿದ್ದಾರೆ