ಬೆಂಗಳೂರು : ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ಕಬ್ಬಿಣದ ಕಡಲೆಯಾಗಿದ್ದು, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಬಂಡಾಯದ ಕಾರಣ ಕೇಸರಿ ಪಕ್ಷವು ತನ್ನ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ ಕ್ಷೀಣಿಸಿದೆ. ಹೀಗಾಗಿ ಜೆಡಿಎಸ್, ಮಂಗಳವಾರ ಕ್ಷೇತ್ರದ ಪ್ರಮುಖರ ಸಭೆ ಕರೆದಿದ್ದು, ಅಲ್ಲಿ ಚರ್ಚಿಸಿದ ಬಳಿಕ ಬಿಜೆಪಿ ಸಹಮತದೊಂದಿಗೆ ತನ್ನದೇ ಅಂತಿಮ ಅಭ್ಯರ್ಥಿಯ ಆಯ್ಕೆ ಮಾಡುವ ನಿರೀಕ್ಷೆ ಇದೆ ಆಗ ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬದ ಸದಸ್ಯರು ಕಣಕ್ಕಿಳಿಯುತ್ತಾರೋ ಅಥವಾ ಬೇರೆಯವರು ಸ್ಪರ್ಧಿಸುತ್ತಾರೋ ಎಂಬ ಕುತೂಹಲಕ್ಕೆ ತೆರೆ ಬೀಳಬೇಕಾಗಿದೆ. ಅಂದರೆ, ನಿಖಿಲ್, ಅನಿತಾ ಹಾಗೂ ಪಕ್ಷದ ಸ್ಥಳೀಯ ಕಾರ್ಯಕರ್ತ ಜಯಮುತ್ತು ಅವರ ಪೈಕಿ ಯಾರು ಅಭ್ಯರ್ಥಿಯಾಗಬಹುದು ಎಂಬುದನ್ನು ಕಾದು ನೋಡಬೇಕು.
ಯೋಗೇಶ್ವರ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತವಾಗಿದ್ದರಿಂದ ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಬಗ್ಗೆ ಹಿಂದೇಟು ಹಾಕುವ ಸಾಧ್ಯತೆಯಿದೆ. ತೀರಾ ಅನಿವಾರ್ಯವಾದರೆ ಪುತ್ರ ನಿಖಿಲ್ ಬದಲು ಪತ್ನಿ ಅನಿತಾರನ್ನು ಅಭ್ಯರ್ಥಿಯನ್ನಾಗಿಸಬಹುದು. ಇಲ್ಲದಿದ್ದರೆ ಪಕ್ಷದ ಕಾರ್ಯಕರ್ತರಿಗೆ ಒಳ್ಳೆಯ ಸಂದೇಶ ನೀಡಬೇಕೆಂಬ ನಿಲವಿಗೆ ಬಂದರೆ ಜಯಮುತ್ತುಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ