ಕುಂದಾಪುರ: ಹದಿಹರೆಯದಲ್ಲಿ ಆನಂದಕ್ಕಾಗಿ ಆರಂಭವಾಗುವ ಮಾದಕ ವ್ಯಸನ ಮುಂದೆ ದುಶ್ಚಟವಾಗಿ ಪರಿವರ್ತನೆಯಾಗಿ ವಿದ್ಯಾರ್ಥಿ ಜೀವನ ದುರಂತಮಯವಾಗುತ್ತದೆ ಈ ನಿಟ್ಟನಲ್ಲಿ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದು ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್ ಹೇಳಿದರು. ಅವರು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ .ವಿ ಪದವಿ ಪೂರ್ವ ಕಾಲೇಜ್ ಗಂಗೊಳ್ಳಿಯಲ್ಲಿ, ಗಂಗೊಳ್ಳಿ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ವತಿಯಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಶ್ರೀಮಂತರ ಹಾಗೂ ಹೆಚ್ಚು ವಿದ್ಯಾಭ್ಯಾಸ ಹೊಂದಿದವರ ಮಕ್ಕಳೇ ಮಾದಕ ವ್ಯಸನಿಗಳಾಗುತ್ತಿರುವುದು ಕಂಡುಬರುತ್ತಿದೆ. ಮಾದಕ ವ್ಯಸನದ ದುಷ್ಪರಿಣಾಮಗಳನ್ನು ಅರಿತುಕೊಂಡು ಬದುಕುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ. ಒಮ್ಮೆ ಇದರ ದಾಸರಾದರೆ ಮುಂದೆ ವಿದ್ಯಾರ್ಥೀಗಳನ್ನು ನಂಬಿಕೊಂಡಿರುವ ಇಡೀ ಕುಟುಂಬ ನೋವು ಅನುಭವಿಸಬೇಕಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಈ ದುಶ್ಚಟಗಳಿಂದ ದೂರವಿರುವುದಲ್ಲದೆ ತಮ್ಮ ಸುತ್ತಮುತ್ತಲಿನ ಪರಿಸರದಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು. ಇದೇ ವೇಳೆ ಅವರು ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆ, ಹಾಗೂ ಪೋಕ್ಸೋ, ಬಾಲ್ಯ ವಿವಾಹ ನಿಷೇದ ,ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.