- ಕ್ಷಣಿಕ ಸುಖ
‘ಈಗೀಗ ದಿನಗಳು ಎಷ್ಟು ಬೇಗನೆ ಉರುಳಿ ಹೋಗುತ್ತಿವೆ; ವರ್ಷ ಮುಗಿದು ಹೋದದ್ದೇ ಗೊತ್ತಾಗಲಿಲ್ಲ’ ಎಂದು ಸಾಮಾನ್ಯವಾಗಿ ನಾವು ಪರಸ್ಪರರಲ್ಲಿ ಹೇಳಿಕೊಳ್ಳುತ್ತಿರುತ್ತೇವೆ. ನಿಜಕ್ಕಾದರೆ ದಿನಗಳು ಬೇಗ ಬೇಗನೆ ಉರುಳಿ ಹೋಗುವ ಪ್ರಶ್ನೆಯೇ ಇಲ್ಲ. ಹಿಂದೆ ಹೇಗೋ ಹಾಗೆ ಇಂದು ಕೂಡ ದಿನ ಅದೇ ಪ್ರಕಾರವಾಗಿ ಸಾಗುತ್ತಿದೆ. ಸೂರ್ಯ ಎಂದಿನಂತೆ ಬೆಳಗ್ಗೆ ಉದಯಿಸುತ್ತಾನೆ; ಸಂಜೆ ಅಸ್ತಮಿಸುತ್ತಾನೆ. ಎಂದಿನಂತೆ ಚಂದ್ರನೂ ಉದಯಿಸುತ್ತಾನೆ. ಬೆಳಗುತ್ತಾನೆ. ಬೆಳೆಯುತ್ತಲೇ ಹೋಗಿ ಕೊನೆಗೆ ಕ್ಷೀಣಿಸುತ್ತಾನೆ. ಕಾಲಚಕ್ರ ತನ್ನ ಕೆಲಸವನು ಒಂದಿನಿತೂ ಚ್ಯುತಿ ಇಲ್ಲದೇ ನಿರ್ವಹಿಸುತ್ತಿದೆ. ಹಾಗಿರುವಲ್ಲಿ ನಮಗ್ಯಾಕೆ ದಿನಗಳು ಬೇಗನೆ ಉರುಳುತ್ತಿರುವ ಭ್ರಮೆ ಕಾಡುತ್ತದೆ? ಅದಕ್ಕೆ ಕಾರಣ ಹುಡುಕಲು ನಾವು ಬಹಳ ದೂರ ಹೋಗಬೇಕಾದ್ದೇನೂ ಇಲ್ಲ. ನಾವು ಇಂದ್ರಿಯ ಸುಖಕ್ಕೆ ಪ್ರಾಧಾನ್ಯ ಕೊಡುವುದರಿಂದ ಹೊರಗಿನ ಸುಖವನ್ನು ಎಷ್ಟು ತಿವ್ರವಾಗಿ ಅನುಭವಿಸುವೆವೋ ಅಷ್ಟೇ ತೀವ್ರವಾಗಿ ಪ್ರಕೃತಿಯ ಮಾಯಾಜಾಲದಲ್ಲಿ ಸಿಲುಕಿಕೊಳ್ಳುತ್ತೇವೆ. ಇಂದ್ರಿಯ ಸುಖದಲ್ಲೇ ಮೈಮರೆಯುತ್ತೇವೆ. ಬದುಕು ತಾಮಸಿಕವಾಗುವಲ್ಲಿ ತೀವ್ರಗತಿಯಲ್ಲಿ ಸಾಗುತ್ತಿದೆ ಎಂಬ ಭ್ರಮೆಗೆ ಒಳಗಾಗುತ್ತೇವೆ. ದುಃಖರಹಿತವಾದ ನಿಷ್ಕಲ್ಮಶ ಆನಂದವನ್ನು ನಾವು ನಮ್ಮ ಒಳಗಿನಿಂದಲೇ ಪಡೆಯಬಹುದು ಎಂಬುದನ್ನು ಅರಿಯುವ ತನಕವೂ ನಾವು ಕಾಮನೆಗಳಿಂದ ತುಂಬಿಕೊಂಡ ಕಾನನದಲ್ಲಿ ದಿಕ್ಕುದೆಸೆಯಿಲ್ಲದೆ ಅಲೆಯುತ್ತಿರುತ್ತೇವೆ. ಹೊರಗಿನಿಂದ ನಾವು ಪಡೆಯಬಹುದಾದ ಎಲ್ಲ ಬಗೆಯ ದೈಹಿಕ ಸುಖಗಳು ನಿಜವಾಗಿಯೂ ನಮ್ಮಲ್ಲಿ ಉಂಟುಮಾಡುವುದು ಉನ್ಮಾದವನ್ನಲ್ಲದೆ ಬೇರೇನನ್ನೂ ಅಲ್ಲ. ಬದುಕಿನಲ್ಲಿ ಇತರರಿಗಿಂತ ಹೆಚ್ಚು ಸುಖ-ಸೌಕರ್ಯವನ್ನು ಪಡೆಯಬೇಕೆಂಬ ಅತ್ಯಾಸೆ ನಮ್ಮದು. ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದೇ ತೀರಬೇಕೆಂಬ ಅತ್ಯಾಸೆಯಲ್ಲಿ ದ್ರವ್ಯ ಸೇವನೆಯ ದುಶ್ಚಟಕ್ಕೆ ಬಲಿಯಾಗುವ ಕ್ರೀಡಾಳುಗಳ ಸ್ಥಿತಿಯೇ ಇಂದು ನಮ್ಮದಾಗಿದೆ