Home » ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ : ಮತ್ತೋರ್ವ ಆರೋಪಿಯ ಬಂಧನ
 

ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ : ಮತ್ತೋರ್ವ ಆರೋಪಿಯ ಬಂಧನ

by Kundapur Xpress
Spread the love

ಮಂಗಳೂರು : ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಡೆದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಜಾಲ್ ಶಾಂತಿನಗರ ನಿವಾಸಿ ಇಬ್ರಾಹಿಂ ಸಿನಾನ್ ಯಾನೆ ಚಿನ್ನು (21) ಬಂಧಿತ ಆರೋಪಿ.

ಈತ 2026ರ ಫೆಬ್ರವರಿ ತಿಂಗಳಲ್ಲಿ ಆರಿಫ್ ಹುಸೇನ್ ಕೊಲೆ ನಡೆಸಲು ಸಂಚು ರೂಪಿಸಿದ್ದ ವೇಳೆ ಹಾಜರಿದ್ದು, ಮಾ .27 ರಂದು ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಈತ ಮೃತ ರೌಡಿಶೀಟರ್ ಟೊಪ್ಪಿ ನೌಫಾಲ್ ಸಹೋದರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈತನ ವಿರುದ್ಧ 2025ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ ಹಾಗೂ 2024ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸಹಿತ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾ.27ರಂದು ಬೆಳಗಿನ ಜಾವ, ತೊಕ್ಕೊಟ್ಟು ಪ್ಲೈಓವರ್ ಬಳಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಆರೀಫ್ ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಈ ಕೃತ್ಯಕ್ಕೆ ಬಳಸಿದ ಕಾರನ್ನು ಬಂಟ್ವಾಳ ತಾಲೂಕಿನ ಬುಡೋಳಿ ಪ್ರದೇಶದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆಯನ್ನು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು.ಈ ಕೊಲೆ ಪ್ರಕರಣದಲ್ಲಿ ಈಗಾಗಲೇ ರಿಫಾತ್ ಆಲಿ, ಇಬ್ರಾಹಿಂ ಖಲೀಲ್, ಅಶ್ಫಕ್ ಯಾನೆ ಜುಟ್ಟು ಅಶ್ಫಕ್, ಉಮ್ಮರ್ ಫಾರೂಕ್ ಇರ್ಫಾನ್, ಶಾಕೀರ್, ರಿಝ್ವಾನ್, ಇರ್ಷಾದ್ ಯಾನೆ ಅಕುಡು, ಹರ್ಷಾದ್, ನಿಶಾಕ್ ಯಾನೆ ಪುಚ್ಚೆ ನಿಶಾಕ್, ಬಿ. ಜುನೈದ್ ಯಾನೆ ಕೊಕ್ಕಡ ಜುನೈದ್ ಹಾಗೂ ಸುಹೇಲ್ ಯಾನೆ ಚಿಯಾ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

 

Related Articles

error: Content is protected !!