Home » ಸಾಲದ ಹಣ ಕೇಳಿದ ವಿಚಾರಕ್ಕೆ : ಸ್ನೇಹಿತನ ಮೇಲೆ ಚೂರಿ ಇರಿದು ಕೊಲೆ
 

ಸಾಲದ ಹಣ ಕೇಳಿದ ವಿಚಾರಕ್ಕೆ : ಸ್ನೇಹಿತನ ಮೇಲೆ ಚೂರಿ ಇರಿದು ಕೊಲೆ

by Kundapur Xpress
Spread the love

ಪಡುಬಿದ್ರಿ : ಸಾಲದ ಹಣ ಕೇಳಿದ ವಿಚಾರಕ್ಕೆ ಸ್ನೇಹಿತನ ಮೇಲೆಯೇ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಜಗೋಳಿ ಅಂಚೆ, ಕಾರ್ಕಳ ನಿವಾಸಿ ಸುಮಿತ್ ಎಸ್. ಸುವರ್ಣ (29) ಅವರು ನೀಡಿದ ದೂರಿನ ಪ್ರಕಾರ, ಆರೋಪಿ ಧೀರಜ್ ಅವರೊಂದಿಗೆ ಸ್ನೇಹಿತರಾಗಿದ್ದು, ಸುಮಾರು ಎರಡು ವರ್ಷಗಳ ಹಿಂದೆ ಧೀರಜ್ ಅವರಿಗೆ 2 ಲಕ್ಷ ರೂ. ಸಾಲ ನೀಡಿದ್ದರು. ಆ ಹಣವನ್ನು ಆರು ತಿಂಗಳಲ್ಲಿ ಹಿಂತಿರುಗಿಸುವುದಾಗಿ ಆರೋಪಿ ತಿಳಿಸಿದ್ದರೂ ಇತನಕ ಹಣವನ್ನು ಹಿಂತಿರುಗಿಸಿರಲಿಲ್ಲ.

ದಿನಾಂಕ 13/03/2026 ರಂದು ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಸ್ಟೇಡಿಯಂ ಬಳಿ ಪಿರ್ಯಾದಿದಾರರು ಸಾಲದ ಹಣವನ್ನು ಕೇಳಿದಾಗ ಆರೋಪಿ ಕೋಪಗೊಂಡು “ನಿನ್ನ ಹಣ ಕೊಡೋದಿಲ್ಲ” ಎಂದು ಹೇಳಿ ಕೈಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ನಂತರ ಮನೆಗೆ ಬಾ, ಹಣ ಕೊಡುತ್ತೇನೆ ಎಂದು ಹೇಳಿ ತನ್ನ ದ್ವಿಚಕ್ರ ವಾಹನದಲ್ಲಿ ಪಿರ್ಯಾದಿದಾರರನ್ನು ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದಾನೆ. ಸ್ಟೇಡಿಯಂನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಬಬ್ಬುಸ್ವಾಮಿ ದೇವಸ್ಥಾನದ ಬಳಿ ರಾತ್ರಿ ಸುಮಾರು 11:50 ಗಂಟೆಗೆ ವಾಹನ ನಿಲ್ಲಿಸಿ ಪಿರ್ಯಾದಿದಾರರನ್ನು ಇಳಿಸಿ ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ಹೊಟ್ಟೆಗೆ ತಿವಿದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Related Articles

error: Content is protected !!