ಕಾರ್ಕಳ : ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 23.04.2026 ರಂದು ಬೆಳಿಗ್ಗೆ 9.10 ಗಂಟೆಯಿಂದ 24.04.2026 ಸಂಜೆ 6.00 ಗಂಟೆಯ ನಡುವಿನ ಅವಧಿಯಲ್ಲಿ, ಕಳ್ಳರು ಪತ್ತೊಂಜಿಕಟ್ಟೆ ನಿವಾಸಿ ಶಂಕರ ಕುಲಾಲ್ ಅವರ ಮನೆಯಲ್ಲಿ ಬಾಗಿಲು ಮೀಟಿ ಒಳನುಗ್ಗಿ ಕಪಾಟಿನಲ್ಲಿ ಇಡಲಾಗಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಕಳವಾದ ವಸ್ತುಗಳಲ್ಲಿ ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 3 ಗ್ರಾಂ ತೂಕದ ಮೂರು ಉಂಗುರಗಳು, 3 ಗ್ರಾಂ ತೂಕದ ಬೆಂಡೋಲೆ ಹಾಗೂ 3 ಗ್ರಾಂ ತೂಕದ ಜುಮ್ಕಿ ಸೇರಿದ್ದು, ಒಟ್ಟು ಅಂದಾಜು ಮೌಲ್ಯ ರೂ. 2.64 ಲಕ್ಷ ಎಂದು ತಿಳಿದುಬಂದಿದೆ.ಈ ಸಂಬಂಧ ಶಂಕರ ಕುಲಾಲ್ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವಿಜಯಪ್ರಸಾದ್ ಅವರ ನೇತೃತ್ವದಲ್ಲಿ, ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್ ಹಾಗೂ ಪಿಎಸ್‌ಐಗಳಾದ ಮುರುಳೀಧರ ನಾಯ್ಕ ಮತ್ತು ಶಿವಕುಮಾರ್ ಎಸ್.ಆರ್ ಅವರ ತಂಡ ಕೈಗೊಂಡು ಆರೋಪಿತ ಆನಂದ ಕುಲಾಲ್ (40)ನನ್ನು ಪತ್ತೆ ಹಚ್ಚಿ ಬಂಧಿಸಿದೆ.ಇದಲ್ಲದೆ, ಕಳವು ಮಾಡಿದ ಚಿನ್ನವನ್ನು ಖರೀದಿಸಿದ್ದ ಜಯರಾಮ ಆಚಾರ್ಯ (54)ನನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ಸುಮಾರು ರೂ. 5.60 ಲಕ್ಷ ಮೌಲ್ಯದ 39 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

